ನವದೆಹಲಿ: ಈಗಾಗಲೇ ದೇಶದ 25 ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭವಾಗಿದೆ. ಇದರ ಬೆನ್ನಲ್ಲೇ ವಂದೇ ಭಾರತ್ ಸ್ಲೀಪರ್ ಕೋಚ್ ಹಾಗೂ ವಂದೇ ಭರತ್ ಮೆಟ್ರೋ ರೈಲು ಕೂಡ ಶೀಘ್ರದಲ್ಲಿ ಆರಂಭವಾಗಲಿದೆ.
ವಂದೇ ಭಾರತ್ ಸ್ಲೀಪರ್ ಕೋಚ್ ಹಾಗೂ ಮೆಟ್ರೋ ರೈಲು ಆರಂಭಿಸುವ ಬಗ್ಗೆ ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ಬಿ.ಜಿ.ಮಲ್ಯ ಮಾಹಿತಿ ನೀಡಿದ್ದಾರೆ. ಈಗಾಗಲೇ ವಂದೇ ಭಾರತ್ ಸ್ಲೀಪರ್ ಕೋಚ್ ಗಳ ತಯಾರಿ ಆರಂಭವಾಗಿದ್ದು, ಶೀಘ್ರದಲ್ಲಿಯೇ ಪ್ರಯಾಣಿಕರಿಗೆ ಲಭ್ಯವಾಗಲಿದೆ. 2024ರ ಮಾರ್ಚ್ ನಲ್ಲಿ ಇವುಗಳ ಚಾಲನೆಗೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ವಂದೆ ಭಾರತ್ ಸ್ಲೀಪರ್ ಕೋಚ್ ಗಳು ದೂರದ ಪ್ರಯಾಣಕ್ಕೆ ಅನುಕೂಲವಾಗಲಿದೆ. ಇದನ್ನು ರಾತ್ರಿ ಮಾತ್ರ ಓಡಿಸಲು ತೀರ್ಮಾನಿಸಲಾಗಿದೆ. ಅಲ್ಲದೇ 22 ಬೋಗಿಗಳ ನಾನ್ ಎ.ಸಿ ಲೋಕೋಮೋಟಿವ್ ಎಂಜಿನ್ ರೈಲುಗಳಿಗೆ ಅಕ್ಟೋಬರ್ ನಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಇನ್ನು ಮಹಾನಗರಗಳಿಂದ ಉಪನಗರಗಳಿಗೆ ತೆರಳುವ ಕಡಿಮೆ ಅಂತರದ ಪ್ರಯಾಣಕ್ಕಾಗಿ ವಂದೇ ಭಾರತ್ ಮೆಟ್ರೋ ರೈಲುಗಳ ಸೇವೆಯನ್ನು ಆರಂಭಿಸಲಾಗುತ್ತಿದೆ. 2024ರ ಜನವರಿಯಲ್ಲಿ 12 ಬೋಗಿಗಳ ವಂದೇ ಭಾರತ್ ಮೆಟ್ರೋ ರೈಲುಗಳಿಗೆ ಚಾಲನೆ ಸಿಗಲಿದೆ ಎಂದು ತಿಳಿಸಿದ್ದಾರೆ.