ಬೆಂಗಳೂರು: 500 ಕೋಟಿ ರೂ. ಮೌಲ್ಯದ 18 ಎಕರೆ ಅರಣ್ಯ ಭೂಮಿಯನ್ನು ಅರಣ್ಯೇತರ ಭೂಮಿಯಾಗಿ ಪರಿವರ್ತಿಸಿದ ಇಬ್ಬರು ಕೆಎಎಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.
ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್. ರವೀಂದ್ರ ಕುಮಾರ್ ಅವರು ಸಲ್ಲಿಸಿದ ದೂರು ಆಧರಿಸಿ ಬೆಂಗಳೂರು ಉತ್ತರ ತಾಲೂಕಿನ ಉಪ ವಿಭಾಗಾಧಿಕಾರಿ ಎಂ.ಜಿ. ಶಿವಣ್ಣ, ಪೂರ್ವ ತಾಲೂಕು ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರ ವಿರುದ್ಧ ಕೇಸ್ ದಾಖಲಿಸಲು ನ್ಯಾಯಾಲಯ ಪೂರ್ವಾನುಮತಿ ನೀಡಿದೆ.
ಕೆಆರ್ ಪುರದ ಕೊತ್ತನೂರಿನ ಸರ್ವೆ ನಂಬರ್ 47ರ 17 ಎಕರೆ 34ಗುಂಟೆ ಅರಣ್ಯ ಭೂಮಿಯನ್ನು ಅರಣ್ಯೇತರ ಭೂಮಿಯಾಗಿ ಪರಿವರ್ತಿಸಿ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.
ನಿಯಮಗಳನ್ನು ಗಾಳಿಗೆ ತೂರಿರುವುದು ಅರಣ್ಯ ಇಲಾಖೆಯ ಗುಪ್ತಚರ ವಿಭಾಗದ ತನಿಖೆಯಲ್ಲೂ ದೃಢಪಟ್ಟಿದೆ. ಅರಣ್ಯೇತರ ಉದ್ದೇಶಕ್ಕೆ ಅರಣ್ಯ ಭೂಮಿಯನ್ನು ಪರಿವರ್ತಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಾಗಿದೆ. ಈ ಪ್ರಕರಣದಲ್ಲಿ ಭೂಮಿ ಕಬಳಿಕೆ ಉದ್ದೇಶದಿಂದ ಅರಣ್ಯ ಭೂಮಿಯನ್ನು ಪರಿವರ್ತನೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಶಿವಣ್ಣ ಮತ್ತು ಅಜಿತ್ ಕುಮಾರ್ ರೈ ವಿರುದ್ಧ ಎಫ್ಐಆರ್ ದಾಖಲಿಸಿ ಆರೋಪ ಪಟ್ಟಿ ಸಲ್ಲಿಸಲು ಪೂರ್ವಾನುಮತಿ ಪಡೆಯಬೇಕಿತ್ತು, ಅಪರಾಧ ದಂಡ ಸಂಹಿತೆ, ಭ್ರಷ್ಟಾಚಾರ ನಿಗ್ರಹದಳ ಕಾಯ್ದೆ ಅನ್ವಯ ಸರ್ಕಾರಿ ಸಿಬ್ಬಂದಿ ವಿರುದ್ಧ ವಿಚಾರಣಾ ಪ್ರಕ್ರಿಯೆ ಆರಂಭಿಸಲು ಸರ್ಕಾರದ ಪೂರ್ವ ಅನುಮತಿ ಕಡ್ಡಾಯವಾಗಿದ್ದು, ಪೂರ್ವಾನುಮತಿ ಕೋರಿ ಅರಣ್ಯ ಇಲಾಖೆ ನ್ಯಾಯಾಲಯದ ಮೊರೆ ಹೋಗಿದ್ದು, ಈಗ ನ್ಯಾಯಾಲಯ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶ ನೀಡಿದೆ.