
ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿನ ಹಗರಣ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಬಿ.ನಾಗೇಂದ್ರ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರ ಬರುತ್ತಿದ್ದಂತೆ ಕೇಂದ್ರ ಬಿಜೆಪಿ ಹಾಗೂ ಇಡಿ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ನಾಗೇಂದ್ರ, ವಾಲ್ಮೀಕಿ ನಿಗಮದ ಹಗರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲದಿದ್ದರೂ ಬಿಜೆಪಿ ನಾಯಕರ ಷಡ್ಯಂತ್ರದಿಂದ ಇಡಿ ಅಧಿಕಾರಿಗಳು ನನ್ನ ಬಂಧಿಸಿದ್ದರು. ಬಿಜೆಪಿ ಒತ್ತಡದಿಂದಾಗಿಯೇ ಇಡಿ ಅಧಿಕಾರಿಗಳು ನನಗೆ ಕಿರುಕುಳ ನೀಡಿದರು ಎಂದು ಆರೋಪಿಸಿದ್ದಾರೆ.
ಎಲ್ಲೆಲ್ಲಿ ಬಿಜೆಪಿಯೇತರ ಅಧಿಕಾರವಿದೆ, ಯಾವ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಅಲ್ಲಿನ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಷಡ್ಯಂತ್ರ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸುವ ನಿಟ್ಟಿನಲ್ಲಿ ವಾಲ್ಮೀಕಿ ನಿಗಮದ ಹಗರಣದಲ್ಲಿ ನನ್ನನ್ನು ಸಿಲುಕಿಸುವ ಯತ್ನ ನಡೆಸಿದರು. ಹಗರಣದಲ್ಲಿ ನನ್ನ ಪಾತ್ರ ಏನೂ ಇಲ್ಲದಿದ್ದರೂ ಷಡ್ಯಂತ್ರ ನಡೆಸಿ, ಇಡಿಯಿಂದ ನನ್ನನ್ನು ಬಂಧಿಸುವಂತೆ ಬಿಜೆಪಿಯವರು ತಂತ್ರ ರೂಪಿಸಿದರು. ಬಂಧನದ ಬಳಿಕ ಕೇಂದ್ರ ಸರ್ಕಾರದ ಒತ್ತಡದ ಮೇರೆಗೆ ಇಡಿ ಅಧಿಕಾರಿಗಳು ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರು ಹೇಳುವಂತೆ ಒತ್ತಾಯಿಸಿದರು ಎಂದಿದ್ದಾರೆ.
ಇದಕ್ಕೆ ನಾನು ನಿರಾಕರಿಸಿದೆ. ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ. ಇನ್ನು ಸಿಎಂ ಹಾಗೂ ಡಿಸಿಎಂ ಪಾತ್ರ ಹೇಗೆ ಇರಲು ಸಾಧ್ಯ? ವಾಲ್ಮೀಕಿ ನಿಗಮದ ಹಗರಣ ಬ್ಯಾಂಕ್ ನಲ್ಲಿ ನಡೆಯುವ ಹಗರಣ. ಇದಕ್ಕೂ ನಮ್ಮ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆನೆ. ಆದರೂ ಬಿಜೆಪಿಯವರು ಷಡ್ಯಂತ್ರ ನಡೆಸಿ ಹಿಂಸಿಸಿದ್ದಾರೆ.
ವಾಲ್ಮೀಕಿ ನಿಗಮದ ಹಣವನ್ನು ಬ್ಯಾಂಕಿನವರೇ ಸೇರಿ ವಾರ್ಗಾವಣೆ ಮಾಡಿಕೊಂಡಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಅವರಿಗೂ ಗೊತ್ತಿಲ್ಲ. ಸಚಿವನಾಗಿದ್ದ ನನಗೂ ಗೊತ್ತಿಲ್ಲ. ಆದರೆ ವಿನಾಕಾರಣ ಇಡಿಯವರು ನನ್ನ ಬಂಧಿಸಿ, ಕಿರುಕುಳ ನೀಡಿದ್ದಾರೆ. ಎಸ್ ಐಟಿ ನ್ನನ ಪಾತ್ರವಿಲ್ಲ ಎದು ಸ್ಪಷ್ಟಡಿಸಿದೆ. ಕೋರ್ಟ್ ಜಾಮೀನು ನೀಡಿದ್ದರಿಂದ ಹೊರಬಂದಿದ್ದೇನೆ. ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದಿದ್ದಾರೆ.