ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. 18 ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ ಆರೋಪಿ ಸತ್ಯನಾರಾಯಣ ವರ್ಮಾನನ್ನು ಎಸ್ಐಟಿ ಪೊಲೀಸರು ಹೈದರಾಬಾದ್ ನಲ್ಲಿ ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಇನ್ನಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.94.73 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 18 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ ಹಣವನ್ನು ಮದ್ಯದ ಅಂಗಡಿಗಳು, ಬಾರ್, ಚಿನ್ನಾಭರಣ ಮಾರಾಟ ಮಳಿಗೆಗಗಳು, ಸಣ್ಣ ಕಂಪನಿಗಳಿಗೆ ವರ್ಗಾಯಿಸಿಕೊಂಡು ನಗದು ಹಣ ಪಡೆದಿರುವುದು ತನಿಖೆಯಲ್ಲಿ ಬಯಲಾಗಿದೆ.
ಇದೇ ರೀತಿ 400ಕ್ಕೂ ಹೆಚ್ಚು ಖಾತೆಗಳಿಗೆ ಆರೋಪಿ ಸತ್ಯನಾರಾಯಣ ಹಣ ವರ್ಗಾವಣೆ ಮಾಡಿ ಬಳಿಕ ನಗದು ರೂಪದಲ್ಲಿ ಹಣ ಪಡೆದಿದ್ದಾನೆ. ಸತ್ಯನಾರಾಯಣ ಸಂಬಂಧಿಕರ ಮನೆಯಲ್ಲಿ 8.21 ಕೋಟಿ ಹಣ ಪತ್ತೆಯಾಗಿದೆ. ಈ ಹಣವನ್ನು 4 ಸೂಟ್ ಕೇಸ್ ಗಳಲ್ಲಿ ತುಂಬಿ ಸಂಬಂಧಿಕರ ಮನೆಯಲ್ಲಿ ಇಡಲಾಗಿತ್ತು. ಈ ಹಣವನ್ನು ಸೀಜ್ ಮಾಡಿರುವ ಎಸ್ಐಟಿ, ಸತ್ಯನಾರಾಯಣನ ಐಷಾರಾಮಿ ಲ್ಯಂಬೋರ್ಗಿನಿ ಕಾರನ್ನು ಜಪ್ತಿ ಮಾಡಿದೆ. 94.75 ಕೋಟಿ ಹಣದಲ್ಲಿ ಸುಮಾರು 11.83 ಕೋಟಿ ನಗದು ಹಣವನ್ನು ಎಸ್ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.