ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮತ್ತೊಂದು ಪಾದಯಾತ್ರೆಗೆ ಸಜ್ಜಾಗಿದೆ. ಮುಡಾ ಹಗರಣದ ವಿರುದ್ಧ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಿ ಗಮನ ಸೆಳೆದಿದ್ದ ವಿಪಕ್ಷ ಬಿಜೆಪಿ ಇದೀಗ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರದ ವಿರುದ್ಧವೂ ಪಾದಯಾತ್ರೆಗೆ ಸಜ್ಜಾಗಿದೆ.
ಈ ಬಗ್ಗೆ ವಿಧಾನಪರಿಷತ್ ಬಿಜೆಪಿ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮಾಹಿತಿ ನೀಡಿದ್ದು, ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣದ ಬಗ್ಗೆ ಸರ್ಕಾರದ ವಿರುದ್ಧ ಪಾದಯಾತ್ರೆ ಮಾಡುತ್ತೇವೆ ಎಂದಿದ್ದಾರೆ.
ಹೈಕಮಾಂಡ್ ನಮಗೆ ಸೂಚನೆ ನೀಡಿದೆ. ವಾಲ್ಮೀಕಿ ಹಗರಣದ ವಿಚಾರವಾಗಿ ಪಾದಯಾತ್ರೆ ಮಾಡಲು ನಾವು ಸಿದ್ಧರಾಗಿದ್ದೇವೆ. ನಮ್ಮ ಎರಡನೇ ಹಂತದ ಹೋರಾಟ ಶುರುವಾಗಲಿದೆ. ಅದು ಯತ್ನಾಳ್ ಪಾದಯಾತ್ರೆಯಲ್ಲ. ನಮ್ಮದೇ ಬಿಜೆಪಿ ಪಾದಯಾತ್ರೆ. ಪಾದಯಾತ್ರೆ ದಿನಾಂಕ ಮತ್ತು ಸ್ವರೂಪದ ಬಗ್ಗೆ ಬಿಜೆಪಿ ನಾಯಕರೆಲ್ಲರೂ ಕುಳಿತು ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.