ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್ ನೋಟ್ ನಲ್ಲಿ ಸಚಿವರ ಹೆಸರಿದೆ. ಆದರೂ ಎಫ್ಐಆರ್ ದಾಖಲಿಸಿಲ್ಲ ಯಾಕೆ? ಇನ್ನೋರ್ವ ಅಧಿಕಾರಿಯನ್ನು ಅಮಾನತು ಮಾಡಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಎಫ್ಐಆರ್ ನಲ್ಲಿ ಮಂತ್ರಿ ಹೆಸರಿಲ್ಲ ಯಾಕೆ? ಹಣ ಗುಳುಂ ಮಾಡಿದ್ದ ಅಧಿಕಾರಿಗಳನ್ನು ಬಂಧಿಸಿಲ್ಲ ಯಾಕೆ? ಅವರನ್ನು ಬಂಧಿಸಿದ್ರೆ ನಿಮ್ಮ ಬಂಡವಾಳ ಹೊರ ಬರುತ್ತಾ? ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಾನು ವರ್ಗಾವಣೆಯಲ್ಲಿ ದುಡ್ಡು ಹೊಡೆದಿಲ್ಲ ಅಂದಿದ್ರು ಸಿಎಂ. ದುಡ್ಡು ಹೊಡೆದಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಈಗ ಯಾವಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ? ಮೃತನ ಮನೆಯಲ್ಲಿದ್ದ ಆ ಪೆನ್ ಡ್ರೈವ್ ನ್ನು ಯಾಕೆ ಒಯ್ದರು? ಆ ಪೆನ್ ಡ್ರೈವ್ ನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಲಿ. ಅಂದು ಈಶ್ವರಪ್ಪ ರಾಜೀನಾಮೆ ಕೊಡಲಿ, ಅವರನ್ನು ವಜಾ ಮಾಡಬೇಕು ಎಂದಿದ್ದರು. ಈಗ ಇವರು ಯಾರ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.