ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ನ ಸಹಕಾರ ಬ್ಯಾಂಕ್ ಅಧ್ಯಕ್ಷರನ್ನು ಸಿಐಡಿ ಎಸ್ಐಟಿ ತಂಡ ಮಂಗಳವಾರ ಬಂಧಿಸಿದೆ.
ಸತ್ಯನಾರಾಯಣ ಇಟಕಾರಿ ಬಂಧಿತ ಆರೋಪಿಯಾಗಿದ್ದಾರೆ. ಹೈದರಾಬದ್ ನ ನಲ್ಲಕುಂಟ ಪ್ರದೇಶದಲ್ಲಿರುವ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕರಾಗಿರುವ ಸತ್ಯನಾರಾಯಣ ಅವರನ್ನು ಎಸ್ಐಟಿ ಬಂಧಿಸಿದೆ.
ವಾಲ್ಮೀಕಿ ನಿಗಮದ 94.73 ಕೋಟಿ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸತ್ಯನಾರಾಯಣ ಪ್ರಧಾನ ಸೂತ್ರದಾರ ಆರೋಪಿಯಾಗಿದ್ದಾರೆ. ಯೂನಿಯನ್ ಬ್ಯಾಂಕ್ ನಲ್ಲಿರುವ ವಾಲ್ಮೀಕಿ ನಿಗಮದ ಖಾತೆಯಿಂದ 18 ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಹಣ ವರ್ಗಾವಣೆಯಾಗಿದ್ದು, ವಂಚನೆಯ ಜಾಲದ ಬೆನ್ನತ್ತಿದಾಗ ಸತ್ಯನಾರಾಯಣ ಅವರೇ 18 ಖಾತೆಗಳನ್ನು ಸೃಷ್ಟಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಇದರ ಬೆನ್ನಲ್ಲೇ ಸತ್ಯನಾರಾಯಣ ಅವರನ್ನು ಸಿಐಡಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಿ ಬಂದನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸಿ ಜೂನ್ 12ರವರೆಗೆ ಕಸ್ಟಡಿಗೆ ಪಡೆಯಲಾಗಿದೆ.