ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಮುಂದುವರೆದಿದ್ದು, ಹೈದರಾಬಾದ್ ನಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಶ್ರೀನಿವಾಸ್ ಬಂಧಿತ ಆರೋಪಿ. ಬೆಂಗಳೂರಿನ ಎಂಜಿ ರಸ್ತೆಯ ಬ್ಯಾಂಕ್ ನಿಂದ ಹೈದರಾಬಾದ್ ನ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾದ ನಂತರ ಡ್ರಾ ಮಾಡಲು ಮತ್ತು ಹಣ ಸಾಗಾಟದಲ್ಲಿ ಏಜೆಂಟ್ ಆಗಿ ಶ್ರೀನಿವಾಸ್ ಕಾರ್ಯ ನಿರ್ವಹಿಸಿದ್ದ. ಹೈದರಾಬಾದ್ ಮೂಲದ ಶ್ರೀನಿವಾಸ್ ಪಾತ್ರದ ಬಗ್ಗೆ ಖಚಿತ ಮಾಹಿತಿ ಪಡೆದ ಎಸ್ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ತನಿಖೆ ಮುಂದುವರೆದಿದೆ.
ಇನ್ನು ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಹಣ ಸಾಗಣೆ ಜಾಲವನ್ನು ಶೋಧಿಸುತ್ತಿರುವ ಎಸ್ಐಟಿ ಅಧಿಕಾರಿಗಳು, ಬಾರ್ ಗಳು, ಚಿನ್ನಾಭರಣ ಮಳಿಗೆಗಳ ಖಾತೆಗಳು ಸೇರಿ 193 ಬ್ಯಾಂಕ್ ಖಾತೆಗಳಿಂದ 10 ಕೋಟಿ ರೂಪಾಯಿ ಮುಟ್ಟುಗೊಲು ಹಾಕಿಕೊಂಡಿದ್ದಾರೆ. ಇದುವರೆಗೆ 28 ಕೋಟಿ ರೂಪಾಯಿ ಜಪ್ತಿ ಮಾಡಲಾಗಿದೆ.