ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಹಣ ಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಎಸ್ಎನ್ಎಲ್ ಮಹಿಳಾ ಅಧಿಕಾರಿಯೊಬ್ಬರ ಪತಿಯನ್ನು ಎಸ್ಐಟಿ ಸೋಮವಾರ ಬಂಧಿಸಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣ ಮೂಲದ ಕಾಕಿ ಶ್ರೀನಿವಾಸರಾವ್ ಬಂಧಿತ ಆರೋಪಿ. ಎರಡು ವರ್ಷಗಳಿಂದ ಯಶವಂತಪುರ ಬಳಿ ತನ್ನ ಕುಟುಂಬದೊಂದಿಗೆ ಆತ ನೆಲೆಸಿದ್ದ. ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ ಎಸ್ಐಟಿ ವಿಚಾರಣೆ ನಡೆಸಿದೆ.
ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ರೀತಿಯಲ್ಲಿ ಛತ್ತಿಸ್ ಗಢದ ಕೃಷಿ ಅಭಿವೃದ್ಧಿ ಮಂಡಳಿಯಲ್ಲಿ ಎರಡು ವರ್ಷಗಳ ಹಿಂದೆ 14 ಕೋಟಿ ರೂಪಾಯಿ ದೋಚಲಾಗಿದ್ದು, ಆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಕಾಕಿ ಶ್ರೀನಿವಾಸರಾವ್ ಕಳೆದ ಅಕ್ಟೋಬರ್ ನಲ್ಲಿ ಜಾಮೀನು ಪಡೆದು ಹೊರಗೆ ಬಂದು ವಾಲ್ಮೀಕಿ ನಿಗಮದ ಪ್ರಕರಣಕ್ಕೆ ಕೈ ಹಾಕಿದ್ದ. ಹವಾಲಾ ಮೂಲಕ ಆರೋಪಿಗಳ ಕೈಗೆ ಹಣ ಸೇರುವಂತೆ ಮಾಡಿದ್ದ. ಪ್ರಕರಣ ಬೆಳಕಿಗೆ ಬರುತ್ತಲೇ ನಾಪತ್ತೆಯಾಗಿದ್ದ ಎನ್ನಲಾಗಿದೆ.