
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಅಮಾನತಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ, ಅಮಾನತುಗೊಂಡ ಲೆಕ್ಕಾಧಿಕಾರಿ ಪರಶುರಾಮ ದುಗ್ಗಣ್ಣನವರನ್ನು ಎಸ್ಐಟಿ ಬಂಧಿಸಿದೆ.
ನಿಗಮದಲ್ಲಿ 94.73 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಸಚಿವ ನಾಗೇಂದ್ರ ಅವರನ್ನು ಶೀಘ್ರ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಧಿಕಾರಿಗಳ ಬಂಧನದ ಬೆನ್ನಲ್ಲೇ ನಿಗಮದ ಕಚೇರಿ, ಬಂಧಿತ ಅಧಿಕಾರಿಗಳ ನಿವಾಸ ಸೇರಿ ಕೆಲವು ಕಡೆ ದಾಳಿ ನಡೆಸಿರುವ ಎಸ್ಐಟಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ.
ಹೈದರಾಬಾದ್ ನಲ್ಲಿಯೂ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗಿದೆ. ನಿಗಮದ ಖಾತೆಯಿಂದ 94.73 ಕೋಟಿ ರೂ ಅಕ್ರಮ ವರ್ಗಾವಣೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿ ಮನೀಶ್ ಖರ್ಬಿಕರ್ ನೇತೃತ್ವದಲ್ಲಿ ಎಸ್ಐಟಿ ರಚಿಸಿದೆ.