
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಮುಖ ರೂವಾರಿ ಮಾಜಿ ಸಚಿವ ಬಿ. ನಾಗೇಂದ್ರ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಹಗರಣದ ಕುರಿತಾಗಿ ತನಿಖೆ ನಡೆಸಿದ ಇಡಿಯಿಂದ 4970 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ. ನಾಗೇಂದ್ರ ಅವರ ಆಣತಿಯಂತೆ ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ. ನಿಗಮದಿಂದ 20.19 ಕೋಟಿ ರೂ. ಪಡೆದು ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಲಾಗಿದೆ. ಹಣ ಅಕ್ರಮವಾಗಿ ವರ್ಗಾವಣೆ ಮಾಡಿ ಬಳ್ಳಾರಿ ಲೋಕಸಭಾ ಕ್ಷೇತ್ರದ ವಿವಿಧ ಬೂತ್ ಗಳಲ್ಲಿ ಹಂಚಲಾಗಿದೆ.
ತಮ್ಮ ಆಪ್ತರ ಮೂಲಕ ಮಾಜಿ ಸಚಿವ ನಾಗೇಂದ್ರ ಹಣ ವರ್ಗಾವಣೆ ಮಾಡಿಸಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ, ಸಾಕ್ಷ್ಯನಾಶ, ಅಪರಾಧಿಕ ಒಳ ಸಂಚಿಗೆ ನಾಗೇಂದ್ರ ಪ್ರಮುಖ ಕಾರಣ ಎಂದು ಹೇಳಲಾಗಿದೆ.