ತಿರುಪತಿ: ವೈಕುಂಠ ಏಕಾದಶಿ ಹಿಂದೂ ಧರ್ಮದಲ್ಲಿ ಪವಿತ್ರ ದಿನ. ಈ ದಿನದಂದು ದೇವಾನುದೇವತೆಗಳು ಭೂಲೋಕಕ್ಕೆ ಬಂದು ಭಗವಂತ ಶ್ರೀಲಕ್ಷ್ಮೀನಾರಾಯಣನ ಪೂಜೆ ಮಾಡುತ್ತಾರೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಸಾಕ್ಷಾತ್ ಭಗವಂತ ವೆಂಕಟೇಶ್ವರನ ರೂಪದಲ್ಲಿ ನೆಲೆಸಿರುವ ತಿರುಪತಿಯಲ್ಲಿ ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆದರೆ ಸಕಲ ಸಂಪತ್ತು, ಪುಣ್ಯ ಹಾಗೂ ಮೋಕ್ಷ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ವೈಕುಂಠ ಏಕಾದಶಿಯ ದಿನವಾದ ಇಂದು ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಭಕ್ತ ಸಾಗರವೇ ಹರಿದುಬದಿದೆ.
ತಿರುಪತಿ ತಿಮ್ಮಪ್ಪನ ದೇವಸ್ಥಾನದ ಸುತ್ತ ಏಳು ಸುತ್ತು ನಡೆಯಲಿರುವ ರಥೋತ್ಸವ, ದೇವಾಲಯದ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಪಡೆದರೆ ಪುಣ್ಯಪ್ರಾಪ್ತಿಯಾಗಲಿದೆ ಎಂಬ ನಂಬಿಕೆಯಿದೆ. ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಕೋಟ್ಯಂತರ ಭಕ್ತರು ಆಗಮಿಸಿದ್ದಾರೆ.
ಎರಡು ದಿನಗಳ ಹಿಂದೆ ನಡೆದ ಕಾಲ್ತುಳಿತ ದುರಂತದಲ್ಲಿ 6 ಜನರು ಸಾವನ್ನಪ್ಪಿದ್ದರು, ಹಲವರು ಗಾಯಗೊಂಡಿದ್ದರು. ಈ ದುರಂತದ ಬಳಿಕ ತಿರುಪತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಘಟನೆಯಲ್ಲಿ ಗಾಯಗೊಂಡಿದ್ದವರಿಗೆ ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇನ್ನು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಾಡಿನ ವಿವಿಧ ವಿಷ್ಣು, ತಿಮ್ಮಪ್ಪನ ದೇವಾಲಯ, ಲಕ್ಷ್ಮೀ ನಾರಯಣ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇಸಲಾಗುತ್ತಿದೆ. ಬೆಂಗಳೂರಿನ ಚಿಕ್ಕತಿರುಪತಿ ದೇವಸ್ಥಾನ, ಇಸ್ಕಾನ್ ದೇವಸ್ಥಾನ, ಮಾಲೂರಿನ ಚಿಕ್ಕತಿರುಪತಿ ದೇವಸ್ಥಾನ, ಮೈಸೂರಿನ ಗಣಪತಿ ಆಶ್ರಮದ ದೇವಸ್ಥಾನ, ಒಂಟಿಕೊಪ್ಪಲು ಬಡಾವಣೆಯ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಮಹಾವಿಷ್ಣು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಭಗವತ್ ಭಕ್ತರು ನಸುಕಿನ ಜಾವದಿಂದಲೇ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಬಂದು ಭಗವಂತನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.