ಬೆಂಗಳೂರು: ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಹಬ್ಬದ ಸಂಭ್ರಮ ಮನೆ ಮಾಡಿದೆ. ತಿರುಪತಿ, ಬೆಂಗಳೂರು, ಮೈಸೂರು, ಶಿವಮೊಗ್ಗ, ಭದ್ರಾವತಿ ಸೇರಿದಂತೆ ನಾಡಿನ ಪ್ರಮುಖ ವೆಂಕಟೇಶ್ವರ, ಶ್ರೀನಿವಾಸ ಸ್ವಾಮಿ ದೇವಾಲಯಗಳಲ್ಲಿ ಭಕ್ತರ ದಂಡೆ ನೆರೆದಿದೆ.
ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಗಿದೆ. ಕೆಲವು ದೇವಾಲಯಗಳಲ್ಲಿ ಸಪ್ತ ದ್ವಾರ ಮೂಲಕ ಹಾದು ದರ್ಶನದ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ತೊಂದರೆಯಾಗದಂತೆ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಪ್ರಸಾದ ವಿತರಣೆ ಮಾಡಲಾಗಿದೆ.
ಬೆಂಗಳೂರಿನ ಮಲ್ಲೇಶ್ವರಂನ ಟಿಟಿಡಿ ದೇವಸ್ಥಾನದಲ್ಲಿ ಭಾರಿ ಸಂಖ್ಯೆಯ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ವೈಕುಂಠ ಏಕಾದಶಿ ದಿನ ದೇವರ ದರ್ಶನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದ್ದು, ಅಪಾರ ಸಂಖ್ಯೆಯ ಭಕ್ತರು ದೇಗುಲಗಳಿಗೆ ತೆರಳಿ ದರ್ಶನ ಪಡೆಯುತ್ತಿದ್ದಾರೆ. ತಿರುಪತಿಯಲ್ಲಿ ಲಕ್ಷಾಂತರ ಭಕ್ತರು ದರ್ಶನಕ್ಕೆ ಕಾದಿದ್ದಾರೆ.