ಗುಜರಾತಿನ ವಡೋದರಾದಲ್ಲಿ ಮಾಂಸಾಹಾರಗಳನ್ನು ಮಾರುಕಟ್ಟೆಯಲ್ಲಿ ಮುಕ್ತವಾಗಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ದಂಡ ವಿಧಿಸುವ ಪ್ರಕ್ರಿಯೆಯೊಂದು ಸಿದ್ಧವಾಗುತ್ತಿದೆ.
ಸ್ಥಳೀಯ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ಯಾವುದೇ ಬೀದಿ ಬದಿಯ ಅಂಗಡಿಗಳಲ್ಲಿ ಮಾಂಸಾಹಾರಗಳನ್ನು ಎಲ್ಲರಿಗೂ ಕಾಣುವಂತೆ ಮಾರಾಟ ಮಾಡುವಂತಿಲ್ಲ. ಮಾಂಸದ ಆಹಾರವನ್ನು ತಯಾರಿಸುವ ಅಂಗಡಿಗಳನ್ನು ಮುಚ್ಚಿಡುವಂತೆ ನಿರ್ದೇಶನ ನೀಡಲಾಗಿದೆ. ಮೊಟ್ಟೆಯನ್ನು ಬಳಕೆ ಮಾಡುವ ಸ್ಟಾಲ್ ಅಥವಾ ತಳ್ಳು ಗಾಡಿಗಳು ಸಹ ಈ ಸೂಚನೆಯನ್ನು ಪಾಲಿಸುವಂತೆ ತಿಳಿಸಲಾಗಿದೆ.
ಗುಜರಾತ್ನ ರಾಜ್ಕೋಟ್ ನಗರದ ಮೇಯರ್ ಮಾಂಸಾಹಾರ ಮಾರಾಟ ಮಾಡುವ ಸ್ಟಾಲ್ಗಳನ್ನು ಪ್ರತ್ಯೇಕ ವಲಯಗಳಿಗೆ ಸೀಮಿತಗೊಳಿಸಿದ ಬೆನ್ನಲ್ಲೇ ವಡೋದರಾದಲ್ಲಿ ಇಂತದ್ದೊಂದು ನಿಯಮವನ್ನು ಜಾರಿಗೆ ತರಲು ಸಿದ್ಧತೆ ನಡೆದಿದೆ.
ವಡೋದರಾ ಮುನ್ಸಿಪಲ್ ಕಾರ್ಪೋರೇಷನ್ ಸ್ಥಾಯಿ ಸಮಿತಿ ಅಧ್ಯಕ್ಷ ಹಿತೇಂದ್ರ ಪಟೇಲ್ ಈ ಸೂಚನೆಯ ವರದಿಗಳನ್ನು ಮೌಖಿಕವಾಗಿ ರವಾನಿಸಿದ್ದಾರೆ ಎನ್ನಲಾಗಿದೆ. ಆಹಾರ ಮಳಿಗೆಗಳು ಅದರಲ್ಲೂ ವಿಶೇಷವಾಗಿ ಮೀನು, ಮಾಂಸ ಹಾಗೂ ಮೊಟ್ಟೆಯನ್ನು ಬಳಸಿ ಮಾಂಸಾಹಾರವನ್ನು ತಯಾರಿಸುವ ಅಂಗಡಿಗಳು ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಅಂಗಡಿಯಲ್ಲಿರುವ ತಿನಿಸು ಯಾರಿಗೂ ಕಾಣದಂತೆ ಮುಚ್ಚಿಡಬೇಕು. ಹಾಗೂ ಮುಖ್ಯ ರಸ್ತೆಗಳಲ್ಲಿ ಇಂತಹ ಸ್ಟಾಲ್ಗಳು ಇರುವಂತಿಲ್ಲ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಮಾಂಸಾಹಾರವು ಧಾರ್ಮಿಕ ಭಾವನೆಗೆ ಸಂಬಂಧಿಸಿದ್ದಾದ್ದರಿಂದ ದಾರಿಯಲ್ಲಿ ಹಾದು ಹೋಗುವ ಯಾರಿಗೂ ಈ ಆಹಾರಗಳು ಗೋಚರವಾಗಬಾರದು. ತೆರೆದ ಮಾರುಕಟ್ಟೆಯಲ್ಲಿ ಮಾಂಸಾಹಾರ ಮಾರಾಟ ಇಷ್ಟು ಸಮಯಗಳ ಕಾಲ ನಡೆದುಕೊಂಡು ಬಂದಿರಬಹುದು. ಆದರೆ ಇದನ್ನು ಸರಿಪಡಿಸುವ ಕಾಲ ಸನ್ನಿಹಿತವಾಗಿದೆ ಎಂದು ಉಲ್ಲೇಖಿಸಿದ್ದಾರೆ.