ಗುಜರಾತ್‌ನ ವಡೋದರದಲ್ಲಿ ನಡೆದ ಭೀಕರ ರಸ್ತೆ ಅಪಘಾತದ ತನಿಖೆಯಲ್ಲಿ ಸಿಸಿ ಟಿವಿ ದೃಶ್ಯಾವಳಿಗಳು ಮಹತ್ವದ ತಿರುವು ನೀಡಿವೆ. ಈ ದುರಂತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿ, ಏಳು ಮಂದಿ ಗಾಯಗೊಂಡಿದ್ದಾರೆ. ವಾಹನ ಚಲಾಯಿಸುವ ಮೊದಲು ಆರೋಪಿ ರಕ್ಷಿತ್ ಚೌರಾಸಿಯಾ ಚಾಲಕನ ಸೀಟನ್ನು ಬದಲಾಯಿಸಿದ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಪ್ರಾರಂಭದಲ್ಲಿ ಪ್ರಾಂಶು ಚೌಹಾಣ್ ಕಾರು ಚಲಾಯಿಸುತ್ತಿದ್ದರು. ಆದರೆ, ಆರೋಪಿ ರಕ್ಷಿತ್ ಚೌರಾಸಿಯಾ ಒತ್ತಾಯದ ಮೇರೆಗೆ ಪ್ರಯಾಣಿಕರ ಸೀಟಿಗೆ ಸ್ಥಳಾಂತರಗೊಂಡರು ಎಂದು ಸಿಸಿ ಟಿವಿ ದೃಶ್ಯಾವಳಿಗಳು ಬಹಿರಂಗಪಡಿಸಿವೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಚೌರಾಸಿಯಾ ರಾತ್ರಿ 10:33ಕ್ಕೆ ಸ್ನೇಹಿತ ಸುರೇಶ್ ಭಾರದ್ವಾಜ್ ಅವರ ನಿವಾಸಕ್ಕೆ ಸ್ಕೂಟರ್‌ನಲ್ಲಿ ಆಗಮಿಸಿದ್ದು, ಚೌಹಾಣ್ ಅಪಘಾತಕ್ಕೆ ಕಾರಣವಾದ ಕಾರನ್ನು ಚಲಾಯಿಸಿಕೊಂಡು ರಾತ್ರಿ 10:47ಕ್ಕೆ ಆಗಮಿಸಿದರು. ರಾತ್ರಿ 11:03ಕ್ಕೆ ಇಬ್ಬರೂ ಭಾರದ್ವಾಜ್ ನಿವಾಸದಿಂದ ಹೊರಟಿದ್ದು, ಚೌಹಾಣ್ ಮೊದಲು ಡ್ರೈವರ್ ಸೀಟಿನಲ್ಲಿ ಕುಳಿತಿದ್ದು, ಚೌರಾಸಿಯಾ ಹಿಂದಿನಿಂದ ಬಂದು ಡ್ರೈವರ್ ಸೀಟಿಗೆ ಕುಳಿತರು.
ಇದಾದ ಕೆಲವೇ ಕ್ಷಣಗಳಲ್ಲಿ, ವಾಹನವು ಸಂಗಮ್ ಪ್ರದೇಶದ ಕಡೆಗೆ ವೇಗವಾಗಿ ಚಲಿಸಿ ಕರೇಲಿಬಾಗ್‌ನಲ್ಲಿ ಮೂರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು, ಒಬ್ಬರ ಸಾವಿಗೆ ಕಾರಣವಾಯಿತು. ಚಾಲಕನ ಬದಲಾವಣೆ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಅಧಿಕಾರಿಗಳು ನಂಬಿದ್ದಾರೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.