ನವದೆಹಲಿ: ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಕುರಿತು ಎರಡು ವಾರದಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಈ ಕುರಿತಾಗಿ ಸಭೆ ನಡೆಸಿ ಚರ್ಚೆ ನಡೆಸಲಿದ್ದು, ಮಕ್ಕಳಿಗೆ ಲಸಿಕೆ ನೀಡಲು ಗ್ರೀನ್ ಸಿಗ್ನಲ್ ನೀಡಲಾಗುವುದು. ಆರಂಭದಲ್ಲಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಆದ್ಯತೆ ನೀಡಲಾಗುವುದು ಎನ್ನಲಾಗಿದೆ.
ಮುಂದಿನ ಎರಡು ವಾರದೊಳಗೆ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದ್ದು, ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ದೊರೆತರೆ ಆರಂಭಿಕ ಹಂತದಲ್ಲಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಲು ಶಿಫಾರಸು ಮಾಡುವ ಸಾಧ್ಯತೆ ಇದೆ. ಜನವರಿಯಲ್ಲೇ ಲಸಿಕೆ ನೀಡಿಕೆ ಕಾರ್ಯ ಆರಂಭಿಸಿ ಮಾರ್ಚ್ ವೇಳೆಗೆ ಪೂರ್ಣಗೊಳಿಸುವ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.
ಜೈಕೋವ್ -ಡಿ ಲಸಿಕೆಯನ್ನು 12 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೂ ನೀಡಲು ಕೇಂದ್ರ ಈಗಾಗಲೇ ಅನುಮೋದನೆ ನೀಡಿದೆ. ಕೊವ್ಯಾಕ್ಸಿನ್ ಅಭಿವೃದ್ಧಿಪಡಿಸಲಾದ ಲಸಿಕೆಯನ್ನು ಎರಡು ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದ ಮಕ್ಕಳಿಗೆ ನೀಡಬಹುದಾಗಿದೆ. ಈ ಲಸಿಕೆಗೆ ಶೀಘ್ರವೇ ಅನುಮೋದನೆ ಸಿಗುವ ಸಾಧ್ಯತೆ ಇದೆ.