![](https://kannadadunia.com/wp-content/uploads/2022/06/Dinesh-Gundu-Rao.jpg)
ಬೆಂಗಳೂರು : ಮಂಗನ ಕಾಯಿಲೆಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ಸಲುವಾಗಿ ಹೊಸ ವ್ಯಾಕ್ಸಿನ್ ಕಂಡು ಹಿಡಿಯುವ ಕುರಿತು ಐಸಿಎಂಆರ್ ಜೊತೆಗೆ ಮಾತುಕತೆ ನಡೆಸಲಾಗಿದ್ದು, ವ್ಯಾಕ್ಸಿನ್ ತಯಾರಿಕೆಗೆ ಐಸಿಎಂಆರ್ ಒಪ್ಪಿಗೆ ಸೂಚಿಸಿದೆ. ಹೈದರಾಬಾದಿನಲ್ಲಿರುವ ಸಂಸ್ಥೆಯು ವ್ಯಾಕ್ಸಿನ್ ಸಂಶೋಧನೆ ನಡೆಸಲಿದ್ದು ಮುಂದಿನ ವರ್ಷದ ವೇಳೆಗೆ ಮಂಗನ ಕಾಯಿಲೆಗೆ ವ್ಯಾಕ್ಸಿನ್ ಲಭ್ಯವಾಗುವ ನಿರೀಕ್ಷೆಯಿದೆ. ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಒಟ್ಟು 70 ಕೆಎಫ್ ಡಿ ಪ್ರಕರಣ ದಾಖಲಾಗಿವೆ. ಹಲವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಉಣ್ಣೆ ಕಡಿತವನ್ನು ತಡೆಗಟ್ಟಲು ಬಳಸಲಾಗುವ DEPA ತೈಲವನ್ನು ಸಾರ್ವಜನಿಕರಿಗೆ ಬಳಸಲು ಉಚಿತವಾಗಿ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೆ 62794 DEPA ಬಾಟಲ್ ಗಳನ್ನು ವಿತರಿಸಲಾಗಿದೆ. ರಾಜ್ಯ ಮಟ್ಟದ ಅಧಿಕಾರಿಗಳು, RRT ತಂಡ ನಿಯಮಿತವಾಗಿ ಭೇಟಿ ನೀಡುತ್ತಿದ್ದು ಸಮಯೋಚಿತ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
VDL ಶಿವಮೊಗ್ಗ ಮತ್ತು MIV ಮಣಿಪಾಲದಲ್ಲಿನ ಪ್ರಯೋಗಾಲಯಗಳನ್ನು KFD ಪರೀಕ್ಷೆಗೆ ಗುರುತಿಸಲಾಗಿದ್ದು, ಶೀಘ್ರವಾಗಿ ಮಾದರಿಗಳನ್ನು ಸಂಸ್ಕರಿಸಿ ಪರೀಕ್ಷೆ ನಡೆಸಿ ವರದಿ ನೀಡಲಾಗುತ್ತಿದೆ. ರೋಗ ಪ್ರಸರಣಾ ಋತುವಿನಲ್ಲಿ ತಾಲ್ಲೂಕು ಆಸ್ಪತ್ರೆಗಳಾದ ಜಿಸಿಎಚ್ ತೀರ್ಥಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆಗಳಲ್ಲಿ KFD ಗೆ ಚಿಕಿತ್ಸೆ ನೀಡಲು ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ICU ನಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯ ಸ್ಥಿತಿ-ಗತಿಯನ್ನು ಪ್ರತಿದಿನ ಪರೀಶೀಲಿಸಲು ಟೆಲಿ-ICU ಸೇವೆಯನ್ನು KFD ಗೂ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.