ನವದೆಹಲಿ: ದೇಶದಲ್ಲಿ ಇಂದಿನಿಂದ ಮತ್ತೊಂದು ಸುತ್ತಿನ ಲಸಿಕಾ ಅಭಿಯಾನ ಆರಂಭವಾಗಲಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಏಪ್ರಿಲ್ 10 ರಿಂದ ಮುನ್ನೆಚ್ಚರಿಕೆ ಡೋಸ್ ನೀಡಲಾಗುವುದು.
ಇದೇ ಸಂದರ್ಭದಲ್ಲಿ ಕೇಂದ್ರದಿಂದ ಮುಖ್ಯವಾದ ಮಾಹಿತಿ ನೀಡಲಾಗಿದೆ. ಲಸಿಕೆಯ ಮಿಶ್ರಣ ಮಾಡಲು ಅವಕಾಶ ಇರುವುದಿಲ್ಲ. ಈ ಹಿಂದೆ ಪಡೆದುಕೊಂಡ ಲಸಿಕೆಯನ್ನೇ ಬೂಸ್ಟರ್ ಡೋಸ್ ವೇಳೆಯಲ್ಲಿಯೂ ಪಡೆದುಕೊಳ್ಳಬೇಕೆಂದು ಸರ್ಕಾರ ತಿಳಿಸಿದೆ.
18 ವರ್ಷ ಮೇಲ್ಪಟ್ಟ ಮತ್ತು ಲಸಿಕೆಯ 2 ಡೋಸ್ ಪಡೆದುಕೊಂಡವರು ಬೂಸ್ಟರ್ ಡೋಸ್ ಪಡೆದುಕೊಳ್ಳಬಹುದು.
ಬೂಸ್ಟರ್ ಡೋಸ್ ನಿಂದ ದೇಹದಲ್ಲಿ ವೈರಸ್ ವಿರುದ್ಧ ಹೋರಾಡುವ ಶಕ್ತಿ ವೃದ್ಧಿಯಾಗಲಿದೆ. ಲಸಿಕೆಗಳ ಪ್ರಭಾವ ಕಾಲಕ್ರಮೇಣ ಕಡಿಮೆಯಾಗುವುದರಿಂದ ಬೂಸ್ಟರ್ ಡೋಸ್ ಪಡೆದಲ್ಲಿ ರೋಗನಿರೋಧಕ ಶಕ್ತಿ ಕಾಯ್ದುಕೊಳ್ಳಬಹುದಾಗಿದೆ.
ಖಾಸಗಿ ಕೇಂದ್ರಗಳಲ್ಲಿ ಮಾತ್ರ ಬೂಸ್ಟರ್ ಡೋಸ್ ನೀಡಲಾಗುವುದು. ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಇಲ್ಲವೇ ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಿಕೊಳ್ಳಬಹುದು. ಲಸಿಕೆಯ ದರ ಮತ್ತು ಸೇವಾ ಶುಲ್ಕವನ್ನು ಇಳಿಕೆ ಮಾಡಲಾಗಿದೆ.
ಮಾರುಕಟ್ಟೆಯಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಗೆ 600 ರೂ. ಮತ್ತು ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಗೆ 1200 ರೂ. ದರ ಇದ್ದು, ಇವೆರಡು ಲಸಿಕೆಗಳ ಪ್ರತಿ ಡೋಸ್ ಗೆ 225 ರೂ. ನಿಗದಿ ಮಾಡಲಾಗಿದೆ. ಗರಿಷ್ಠ ಸೇವಾಶುಲ್ಕ 150 ರೂ. ಸೇರಿ 375 ರೂ.ಗೆ ಲಸಿಕೆ ಪಡೆಯಬಹುದಾಗಿದೆ.