ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ಭಾರಿ ಸಾವು, ನೋವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಮೂರನೇ ಅಲೆ ಬರುವುದರೊಳಗೆ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರದಿಂದ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ತಜ್ಞರು ಮೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಲಸಿಕೆ ನೀಡಿಕೆಯನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಯೋಜನೆ ರೂಪಿಸಲಾಗ್ತಿದೆ. ಕೇಂದ್ರ ಸರ್ಕಾರ ತಜ್ಞರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈಗಾಗಲೇ ನೀಡಲಾಗುತ್ತಿರುವ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಜೊತೆಗೆ ಇನ್ನೂ ಮೂರು ಲಸಿಕೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.
ರಷ್ಯಾದ ಸ್ಪುಟ್ನಿಕ್, ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಮಾಡೆರ್ನಾ ಲಸಿಕೆ ಕೂಡ ಶೀಘ್ರವೇ ಭಾರತದಲ್ಲಿ ಬಳಕೆಗೆ ಸಿಗಲಿವೆ. ಇವುಗಳೊಂದಿಗೆ ಡಿ.ಆರ್.ಡಿ.ಒ. ತಯಾರಿಸಿದ ಕೊರೋನಾ ವಿರುದ್ಧದ ಔಷಧ ಬಳಕೆ ಮಾಡಿಕೊಳ್ಳಲಾಗುವುದು. ಇವೆಲ್ಲವನ್ನು ಬಳಸಿಕೊಂಡು ದೇಶಾದ್ಯಂತ ಎಲ್ಲರಿಗೂ ಕೊರೋನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ವ್ಯವಸ್ಥಿತ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಮೂರನೇ ಅಲೆ ಆರಂಭವಾಗುವುದರೊಂದಿಗೆ ಎಲ್ಲರಿಗೂ ಲಸಿಕೆ ನೀಡಲು ಅಗತ್ಯ ತಯಾರಿ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.