ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆ ಮತ್ತು ಕೆರೆಗಳನ್ನು ಒತ್ತುವರಿ ಮಾಡಿದ ಜಾಗದಲ್ಲಿ ನಿರ್ಮಾಣ ಮಾಡಿರುವ ಎಲ್ಲಾ ಕಟ್ಟಡಗಳನ್ನು ನವೆಂಬರ್ 15ರೊಳಗೆ ತೆರವುಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ತಹಶೀಲ್ದಾರರು ಮತ್ತು ಪಾಲಿಕೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಮಳೆ ನೀರು ಕಾಲುವೆಗಳು, ಕೆರೆಗಳನ್ನು ಒತ್ತುವರಿ ಮಾಡಿ ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸುವ ಕುರಿತಂತೆ ಎಲ್ಲಾ ವಲಯದ ತಹಶೀಲ್ದಾರ್ ಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕೂಡಲೇ ಅಗತ್ಯ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಎಲ್ಲಾ ಬೃಹತ್ ಮಳೆ ನೀರು ಕಾಲುವೆಗಳು, ಕೆರೆಗಳ ಸರ್ವೆ ನಡೆಸಿ ಸರ್ವೇ ದಾಖಲೆ ಬಂದ ಕೂಡಲೇ ಒತ್ತುವರಿಯಾದ ಕಟ್ಟಡಗಳನ್ನು ನವೆಂಬರ್ 15ರೊಳಗೆ ತೆರವುಗೊಳಿಸಬೇಕು ಇಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.