ಬೆಂಗಳೂರು: ಪಶು ಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನೆರಡು ತಿಂಗಳಲ್ಲಿ 200 ಪಶು ವೈದ್ಯಕೀಯ ನಿರೀಕ್ಷಕರು, ವರ್ಷಾಂತ್ಯದ ವೇಳೆಗೆ 400 ಪಶು ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುವುದು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಗುರುರಾಜ ಶೆಟ್ಟಿ ಗಂಟಿಹೊಳಿ ಅವರ ಪ್ರಶ್ನೆಗೆ ಪಶು ಸಂಗೋಪನಾ ಸಚಿವ ವೆಂಕಟೇಶ್ ಉತ್ತರ ನೀಡಿದ್ದಾರೆ.
ಪಶು ಸಂಗೋಪನಾ ಇಲಾಖೆಯಲ್ಲಿ ಪಶು ವೈದ್ಯರು, ಪಶು ವೈದ್ಯಕೀಯ ನಿರೀಕ್ಷಕರ ಕೊರತೆ ಇದೆ. ಇದನ್ನು ಸರಿಪಡಿಸಲು ಇನ್ನೆರಡು ತಿಂಗಳಲ್ಲಿ ಪಶು ವೈದ್ಯಕೀಯ ನಿರೀಕ್ಷಕರ ಮತ್ತು ಡಿಸೆಂಬರ್ ವೇಳೆಗೆ 400 ಪಶು ವೈದ್ಯರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ವಿವಿಧ ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿರುವ ಹೊಸ ವೈದ್ಯರು ಮತ್ತು ಪಶು ವೈದ್ಯಕೀಯ ನಿರೀಕ್ಷಕರನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. 30 ಹೊಸ ಪಶು ವೈದ್ಯಕೀಯ ಆಸ್ಪತ್ರೆಗಳ ಮಂಜೂರಾತಿಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಅಗತ್ಯವಿರುವಡೆ ಹೊಸ ಆಸ್ಪತ್ರೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.