ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಿಪಿಎಲ್ ಕುಟುಂಬದವರಿಗೆ ಅಮೃತ ಜ್ಯೋತಿ ಯೋಜನೆಯಡಿ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯನ್ನು ರದ್ದು ಮಾಡಲಾಗಿದೆ ಎನ್ನುವ ಚರ್ಚೆ ನಡೆದಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಿಪಿಎಲ್ ಕುಟುಂಬದವರಿಗೆ ಅಮೃತ ಜ್ಯೋತಿ ಯೋಜನೆಯಡಿ 75 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆ ಅನುಷ್ಠಾನದ ಆದೇಶ ರದ್ದಾಗಿಲ್ಲ. ಮಾರ್ಗಸೂಚಿಗಳನ್ನು ನೀಡಿದ್ದ ಸುತ್ತೋಲೆಯನ್ನು ಮಾತ್ರ ಹಿಂಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಫಲಾನುಭವಿಗಳ ಆಯ್ಕೆಗಾಗಿ ನಿಗದಿಪಡಿಸಲಾಗಿದ್ದ ಕೆಲವು ಮಾನದಂಡಗಳನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದ್ದು, ಈ ಕಾರಣದಿಂದ ಸುತ್ತೋಲೆ ರದ್ದು ಮಾಡಲಾಗಿದೆ ಎಂದು ಹೇಳಿದ್ದಾರೆ.
ಯೋಜನೆ ಜಾರಿಗೆ ಮೇ 18 ರಂದು ಆದೇಶ ಹೊರಡಿಸಲಾಗಿದ್ದು, ಫಲಾನುಭವಿಗಳ ಅರ್ಹತೆ ಮಂಜೂರಾತಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳುಳ್ಳ ಸುತ್ತೋಲೆಯನ್ನು ಆಗಸ್ಟ್ 24ರಂದು ಹೊರಡಿಸಲಾಗಿತ್ತು. ಆಗಸ್ಟ್ 24ರ ಸುತ್ತೋಲೆಯನ್ನು ಹಿಂಪಡೆದು ಸೆಪ್ಟೆಂಬರ್ 3 ರಂದು ಆದೇಶ ಹೊರಡಿಸಲಾಗಿದೆ.
ಉಚಿತ ವಿದ್ಯುತ್ ಯೋಜನೆ ಕೈ ರದ್ದು ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ಚರ್ಚೆ ನಡೆದಿದ್ದು, ಈ ಕುರಿತು ಸಚಿವರು ಸ್ಪಷ್ಟನೆ ನೀಡಿದ್ದಾರೆ. ಯೋಜನೆ ಅನುಷ್ಠಾನದ ಆದೇಶ ರದ್ದಾಗಿಲ್ಲ. ಮಾರ್ಗಸೂಚಿ ನೀಡಿದ್ದ ಸುತ್ತೋಲೆಯನ್ನು ಮಾತ್ರ ಹಿಂಪಡೆಯಲಾಗಿದೆ. ಮಾನದಂಡಗಳನ್ನು ಪರಿಷ್ಕರಿಸಲಾಗುವುದು ಎಂದು ಹೇಳಿದ್ದಾರೆ.