ಉಡುಪಿ: ರಾಜ್ಯದಲ್ಲಿ ಮೇ 5 ರಿಂದ 15 ರವರೆಗೆ 10 ದಿನಗಳ ಕಾಲ ಎಲ್ಲಾ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣೆಯ ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ಇಲಾಖೆಯ ಲೈನ್ ಮ್ಯಾನ್ ನಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ಎಲ್ಲರೂ ಟ್ರಾನ್ಸ್ ಫಾರ್ಮರ್ ನಿರ್ವಹಣೆ ಬಗ್ಗೆ ಗಮನ ಹರಿಸಲಿದ್ದಾರೆ. ನಿರ್ವಹಣೆ ಸಮಸ್ಯೆಯಿಂದ ಕೆಲವು ಕಡೆಗಳಲ್ಲಿ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡು ಪ್ರಾಣ ಹಾನಿಯಾಗಿದೆ. ಹೀಗಾಗಿ ವಿಶೇಷ ಅಭಿಯಾನದಲ್ಲಿ ರಾಜ್ಯದ ಎಲ್ಲಾ ಟ್ರಾನ್ಸ್ ಫಾರ್ಮರ್ ಗಳಲ್ಲಿ ಹೆಚ್ಚುವರಿ ಲೋಡ್, ಆಯಿಲ್ ಕೊರತೆ, ಅರ್ಥಿಂಗ್ ಮೊದಲಾದ ಸಮಸ್ಯೆಗಳ ತಪಾಸಣೆ ನಡೆಸಿ ಅಪಾಯಕಾರಿ ಸ್ಥಿತಿಯಲ್ಲಿರುವ ಟ್ರಾನ್ಸ್ ಫಾರ್ಮರ್ ಗಳನ್ನು ತಕ್ಷಣವೇ ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆಯಾಗಿಲ್ಲ. ಸರಬರಾಜು ಮತ್ತು ನಿರ್ವಹಣೆ ಸರಿಯಾಗಿದೆ ಎಂದ ಅವರು, ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 1000 ಚಾರ್ಜಿಂಗ್ ಸೆಂಟರ್ ಗಳನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.