![](https://kannadadunia.com/wp-content/uploads/2023/05/v-somanna-dh-1199870-1678760923-1200215-1678837914.png)
ಬೆಂಗಳೂರು: ಬಿಜೆಪಿ ವರಿಷ್ಠರ ವಿರುದ್ಧವೇ ತೀವ್ರ ಅಸಮಾಧಾನ ಹೊರ ಹಾಕಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯತ್ನಗಳು ನಡೆಯುತ್ತಿದ್ದು, ಮಠಾಧೀಶರ ಮೂಲಕವೇ ಮನವೊಲಿಕೆ ಯತ್ನಕ್ಕೆ ಬಿಜೆಪಿ ಮುಂದಾಗಿದೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಗಂಗಾ ಶ್ರೀಗಳ ಬಳಿ ಅಳಲು ತೋಡಿಕೊಂಡಿದ್ದ ಸೋಮಣ್ಣ, ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಅನಿವಾರ್ಯತೆಯನ್ನು ಅಮಿತ್ ಶಾ ತಂದಿದ್ದರು ಎಂದು ಹೇಳಿದ್ದರು. ಸೋಲಿನ ಬಳಿಕ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಸಿಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಕಾಂಗ್ರೆಸ್ ನಾಯಕರು ವಿ.ಸೋಮಣ್ಣ ಅವರನ್ನು ಸಂಪರ್ಕಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವಿ.ಸೋಮಣ್ಣ ಅವರನ್ನು ಸಮಾಧಾನ ಪಡಿಸಲು ರಾಜ್ಯ ಬಿಜೆಪಿ ಘಟಕ ಲಿಂಗಾಯಿತ ಮಠಾಧೀಶರನ್ನು ಸಂಪರ್ಕಿಸಿ ಮಾತುಕತೆ ನಡೆಸಿದೆ.
ಅಲ್ಲದೇ ಹೈಕಮಾಂಡ್ ನಾಯಕರು ಕೂಡ ಮಠಾಧೀಶರೊಂದಿಗೆ ಚರ್ಚಿಸಿ ಸೋಮಣ್ಣ ಅವರಿಗೆ ರಾಜಕೀಯ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸೂಚಿಸಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಚಿಕ್ಕಮಗಳೂರಿನ ಪೀಠದ ಮೂಲಕವೂ ಸೋಮಣ್ಣ ಮನವೊಲಿಕೆ ಯತ್ನ ನಡೆದಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಂದ ಸಂಧಾನ ಸೂತ್ರ ನಡೆಸಲಾಗಿದೆ ಎಂದು ತಿಳಿದುಬಂದಿದೆ.