ಬೆಂಗಳೂರು: ಲೋಕಾರ್ಪಣೆ ಶಿಲಾಫಲಕದಲ್ಲಿ ತಮ್ಮ ಹೆಸರು ಇಲ್ಲದಿರುವುದಕ್ಕೆ ವಸತಿ ಸಚಿವ ವಿ. ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗೋವಿಂದರಾಜನಗರ ಕ್ಷೇತ್ರದ ಶಾಸಕರಾದ ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದ್ದು, ಅವರು ಹೆದರಿಸುತ್ತಾರೆ ಎಂದು ನೀವು ಹೆದರಿಕೊಂಡು ಕುಳಿತುಕೊಳ್ಳುತ್ತಿರಾ? ಕೂಡಲೇ ಶಿಲಾಫಲಕ ಬದಲಾಯಿಸಿ, ಇಲ್ಲದಿದ್ದರೆ ಒಡೆದು ಹಾಕುತ್ತೇನೆ. ಇದೆಲ್ಲ ರಾಜ್ಯ ಸರ್ಕಾರದ ದುಡ್ಡು, ಕೇಂದ್ರ ಸರ್ಕಾರದ ಅನುದಾನವಲ್ಲ ಎಂದು ಗುಡುಗಿದ್ದಾರೆ.
ಜೂನ್ 20 ರಂದು ಬೆಂಗಳೂರಿನ ಬೇಸ್ ಕ್ಯಾಂಪಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲ್ದರ್ಜೆಗೇರಿಸಲಾದ ಐಟಿಐಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಲೋಕಾರ್ಪಣೆಯ ಶಿಲಾಫಲಕದಲ್ಲಿ ತಮ್ಮ ಹೆಸರು ಇಲ್ಲದಿರುವುದಕ್ಕೆ ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಸ್ ಕ್ಯಾಂಪಸ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಶಿಲಾಫಲಕ ದಲ್ಲಿ ನನ್ನ ಹೆಸರೇ ಇಲ್ಲದಿದ್ದರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವುದಾದರೂ ಹೇಗೆ? ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ.
ಕೂಡಲೇ ಶಿಲಾಫಲಕ ಬದಲಾಯಿಸಬೇಕೆಂದು ಸೋಮಣ್ಣ ಸೂಚನೆ ನೀಡಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಅವರ ಎದುರಲ್ಲೇ ಸೂಚನೆ ನೀಡಿದ್ದಾರೆ. ಶಿಲಾಫಲಕದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಅವರ ಹೆಸರು ಮಾತ್ರ ಉಲ್ಲೇಖಿಸಲಾಗಿದೆ. ಶಿಲಾಫಲಕದಲ್ಲಿ ತಮ್ಮ ಹೆಸರು ಹಾಕಿಸುವಂತೆ ಸೋಮಣ್ಣ ಸೂಚನೆ ನೀಡಿದ್ದಾರೆನ್ನಲಾಗಿದೆ.