ರಾಂಚಿ: ಉತ್ತರಾಖಂಡದಲ್ಲಿ ವರುಣಾರ್ಭಟಕ್ಕೆ ಭೀಕರ ಪ್ರವಾಹವುಂಟಾಗಿದ್ದು, ಪರಿಸ್ಥಿತಿ ಅವಲೋಕನಕ್ಕೆ ತೆರಳಿದ್ದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಎದುರು ಬಂದರೂ ಮೊಬೈಲ್ ನಲ್ಲಿ ಮಾತನಾಡುವುದನ್ನು ನಿಲ್ಲಿಸದ ಪೊಲೀಸ್ ಅಧಿಕಾರಿ, ಫೋನ್ ನಲ್ಲಿ ಮಾತನಾಡುತ್ತಲೇ ಮುಖ್ಯಮಂತ್ರಿಗಳಿಗೆ ಸೆಲ್ಯೂಟ್ ಹೊಡೆದಿದ್ದಾರೆ.
ಮಳೆ, ಪ್ರವಾಹಪೀಡಿತ ಪ್ರದೇಶಕ್ಕೆ ಖುದ್ದು ಭೇಟಿ ನೀಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ, ಗುಡ್ಡಗಾಡು ಪ್ರದೇಶದಲ್ಲಿ ಸಣ್ಣ ವಿಮಾನದಲ್ಲಿ ತೆರಳಿದ್ದರು. ವಿಮಾನ ಗ್ರಾಸ್ತ್ ಗಂಜ್ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಮುಖ್ಯಮಂತ್ರಿಗಳು ವಿಮಾನದಿಂದ ಇಳಿದು ಬರುತ್ತಿರುವುದನ್ನು ಗಮನಿಸಿದರೂ ಪರಿಸ್ಥಿತಿ ಗಂಭೀರತೆ ಅರಿಯದ ಎಎಸ್ ಪಿ ಶೇಖರ್ ಸುಯಲ್ ಮೊಬೈಲ್ ನಲ್ಲಿ ಮಾತನಾಡುತ್ತಲೇ ಮುಖ್ಯಮಂತ್ರಿಗಳಿಗೆ ಸೆಲ್ಯೂಟ್ ಹೊಡೆದಿದ್ದಾರೆ.
ಸರ್ಕಾರಿ ಪ್ರೊಟೋಕಾಲ್ ಪ್ರಕಾರ ಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳುವಂತೆ ಪೊಲೀಸ್ ಅಧಿಕಾರಿ ಶೇಖರ್ ಅವರನ್ನು ನೇಮಿಸಿದರೂ ಜವಾಬ್ದಾರಿ ಅರಿಯದ ಅಧಿಕಾರಿ ಒಂದು ಕೈಯಲ್ಲಿ ಮೊಬೈಲ್ ಕಿವಿಗೆ ಹಿಡಿದು ಮಾತನಾಡುತ್ತ ಮತ್ತೊಂದು ಕೈಯಲ್ಲಿ ಮುಖ್ಯಮಂತ್ರಿಗಳಿಗೆ ಸೆಲ್ಯೂಟ್ ಹೊಡೆದಿದ್ದಾರೆ.
ಸಾಮಾಜಿಕ ಜಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಉನ್ನತ ಅಧಿಕಾರಿಗೂ ವಿಷಯ ಗೊತ್ತಾಗಿದೆ. ಕೋಟ್ ದ್ವಾರದ ಹೆಚ್ಚುವರಿ ಎಎಸ್ ಪಿಯಾಗಿದ್ದ ಶೇಖರ್ ಸುಯಲ್ ಅವರನ್ನು ಶಿಸ್ತುಕ್ರಮ ನಿಟ್ಟಿನಲ್ಲಿ ನರೇಂದ್ರ ನಗರದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾವಣೆ ಮಾಡಿದ್ದಾರೆ. ಕೋಟ್ ದ್ವಾರದ ಹೊಸ ಎಎಸ್ ಪಿಯಾಗಿ ಜಯ್ ಬುಲನಿಯವರನ್ನು ನೇಮಕ ಮಾಡಿದ್ದಾರೆ.