ಡೆಹ್ರಾಡೂನ್: ಉತ್ತರ ಪ್ರದೇಶದಲ್ಲಿ ಚುನಾವಣೆ ಕಾವೇರಿದ್ದು, ಆಡಳಿತ ಪಕ್ಷ ಬಿಜೆಪಿಯ ಅನೇಕ ಘಟಾನುಘಟಿ ಸಚಿವರು, ಶಾಸಕರು ಪಕ್ಷ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಉತ್ತರಾಖಂಡ್ ನಲ್ಲಿ ಬಿಜೆಪಿ ನಾಯಕ, ಸಚಿವ ಹರಕ್ ಸಿಂಗ್ ರಾವತ್ ಕಾಂಗ್ರೆಸ್ ಸೇರಲಿದ್ದಾರೆ.
ಅವರನ್ನು ಭಾನುವಾರ ರಾಜ್ಯ ಸಂಪುಟದಿಂದ ಉಚ್ಚಾಟಿಸಲಾಗಿದೆ. ಆರು ವರ್ಷಗಳ ಕಾಲ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಲಾಗಿದೆ. ಹರಕ್ ಸಿಂಗ್ ರಾವತ್ ಮತ್ತು ಅವರ ಸೊಸೆ ಅನುಕೃತಿ ಗುಸೇನ್ ಸೋಮವಾರ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಇದು ಮುಂದಿನ ತಿಂಗಳು ನಡೆಯಲಿರುವ ಉತ್ತರಾಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಾವತ್ ಅವರನ್ನು ಸಂಪುಟದಿಂದ ವಜಾಗೊಳಿಸುವ ಕುರಿತು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾವತ್ ಅವರನ್ನು ಮುಖ್ಯಮಂತ್ರಿ ಧಾಮಿ ಅವರು ಸಂಪುಟದಿಂದ ವಜಾಗೊಳಿಸಿದ್ದಾರೆ. ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರ ಶಾದಾಬ್ ಶಾಮ್ಸ್ ಹೇಳಿದ್ದಾರೆ.
ಈ ನಿರ್ಧಾರವನ್ನು ಸ್ವಾಗತಿಸಿರುವ ಶಾಮ್ಸ್, ಇದು ಬಿಜೆಪಿ ಅಶಿಸ್ತು ಸಹಿಸದ ಮತ್ತು ಯಾವುದೇ ರೀತಿಯ ಒತ್ತಡಕ್ಕೆ ಮಣಿಯದ ಪಕ್ಷ ಎಂಬ ಬಲವಾದ ಸಂದೇಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಕೋಟ್ ದ್ವಾರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಾವತ್ ಅವರು ತಮ್ಮ ಸೊಸೆ ಅನುಕೃತಿ ಗುಸೇನ್ ಅವರಿಗೆ ಲ್ಯಾನ್ಸ್ ಡೌನ್ ಕ್ಷೇತ್ರದಿಂದ ಟಿಕೆಟ್ ಮತ್ತು ತನಗೆ ಸ್ಥಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಕೆಲ ದಿನಗಳಿಂದ ರಾವತ್ ಅವರು ಬಿಜೆಪಿ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅವರು ಕಾಂಗ್ರೆಸ್‌ನೊಂದಿಗೆ ಸಂಪರ್ಕದಲ್ಲಿದ್ದಾರೆ, ಇತರ ಕಾರಣಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಬಿಜೆಪಿ ಅವರನ್ನು ಉಚ್ಚಾಟಿಸಿದೆ ಎಂದು ಹೇಳಲಾಗಿದೆ.
ಹರಕ್ ಸಿಂಗ್ ರಾವತ್ ಮತ್ತು ಅವರ ಸೊಸೆ ದೆಹಲಿಗೆ ತೆರಳಿದ್ದಾರೆ. ಸೊಸೆಗೆ ಟಿಕೆಟ್ ಸಿಗದ ಕಾರಣ ರಾವತ್ ಕೋಪಗೊಂಡಿದ್ದಾರೆ ಎಂದು ಸಚಿವರ ಆಪ್ತರೊಬ್ಬರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ರಾವತ್ ಅವರು ಕಾಂಗ್ರೆಸ್‌ನೊಂದಿಗೆ ಸಂಪರ್ಕದಲ್ಲಿದ್ದಾರೆ. ಇತರ ಇಬ್ಬರು ಬಿಜೆಪಿ ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಮಾತುಕತೆ ನಡೆಯುತ್ತಿದೆ. ಉತ್ತರಾಖಂಡ್ ನಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.