ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ನು ಬಿಟ್ಟಿರಲಾರದಂತಾಗಿದೆ. ಏನನ್ನು ಬೇಕಾದ್ರು ಬಿಟ್ಟು ಇರಬಹುದು ಆದರೆ ಮೊಬೈಲ್ ಅನ್ನು ಮಾತ್ರ ಬಿಟ್ಟಿರಲು ಸಾಧ್ಯವಿಲ್ಲ ಅನ್ನೋ ಹಾಗಾಗಿದೆ. ಅದರಲ್ಲೂ ಫೋನ್ ಅನ್ನು ಕಳೆದುಕೊಳ್ಳುವುದು ಇದೆಯಲ್ವಾ ಅದಕ್ಕಿಂತ ಬೇಸರದ ಸಂಗತಿ ಮತ್ತೊಂದಿಲ್ಲ. ವಿಶೇಷವಾಗಿ ಐಫೋನ್ ಅನ್ನು ಕಳೆದುಕೊಳ್ಳುವುದು ಅಂದ್ರೆ ಜೇಬು ತೂತಾಯಿತು ಅಂತಾನೇ ಅನಿಸುತ್ತದೆ. ಇದೆಲ್ಲಾ ಯಾಕೆ ಹೇಳ್ತಾ ಇದ್ದೀವಿ ಅಂತಾ ಅಂದುಕೊಳ್ಳುತ್ತಿರುವಿರಾ..? ಹಾಗಿದ್ರೆ ಮುಂದೆ ಓದಿ.
ಉತ್ತರಾಖಂಡದ ಋಷಿಕೇಶದಲ್ಲಿ ಪ್ರವಾಸಿಯೊಬ್ಬರು ತಮ್ಮ ಫೋನ್ ಕಳೆದುಕೊಂಡಾಗ ಈ ಎಲ್ಲಾ ತೊಂದರೆಗಳನ್ನು ಅನುಭವಿಸಿದ್ರು. ಅಷ್ಟರಲ್ಲಿ ಖಾಕಿ ಪಡೆ ಅವರ ಆಪದ್ಬಾಂಧವರಾಗಿ ಅಲ್ಲಿಗೆ ಬಂದಿದ್ದಾರೆ. ಪೊಲೀಸ್ ತಂಡದ ತ್ವರಿತ ಕ್ರಮಗಳಿಂದಾಗಿ ಯುವತಿಯು ತನ್ನ 65,000 ರೂಪಾಯಿ ಮೌಲ್ಯದ ಐಫೋನ್ ಮತ್ತೆ ಪಡೆದುಕೊಳ್ಳುವಂತಾಯಿತು.
ಈ ಬಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡ ಉತ್ತರಾಖಂಡ ಪೊಲೀಸರು, ಋಷಿಕೇಶದ ಜನಕ್ ಸೇತುವೆಯ ಬಳಿ ಜನನಿಬಿಡ ಸ್ಥಳದಲ್ಲಿ ಯುವತಿ ತನ್ನ ಫೋನ್ ಕಳೆದುಕೊಂಡಿದ್ದಾಳೆ ಎಂದು ಬಹಿರಂಗಪಡಿಸಿದ್ದಾರೆ. ಆಕೆಯ ದೂರಿನ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ ಫೋನ್ ಪತ್ತೆ ಮಾಡಿ ಆಕೆಗೆ ಹಿಂತಿರುಗಿಸಿದೆ. ಪೊಲೀಸ್ ಅಧಿಕಾರಿಯೊಬ್ಬರು ಐಫೋನ್ ಅನ್ನು ಅದರ ಮಾಲೀಕರಿಗೆ ಹಿಂದಿರುಗಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಪೊಲೀಸ್ ತಂಡದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಉತ್ತರಾಖಂಡ ಪೊಲೀಸರಿಗೆ ಸೆಲ್ಯೂಟ್ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.