ಡೆಹ್ರಾಡೂನ್: ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಲು ಬಿಜೆಪಿ ಆಡಳಿತದ ರಾಜ್ಯಗಳು ಚಿಂತನೆ ನಡೆಸಿರುವ ಹೊತ್ತಲ್ಲೇ ಉತ್ತರಾಖಂಡ್ ಸರ್ಕಾರ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಿತರಿಗೆ ಆರ್ಥಿಕ ನೆರವು ನೀಡಲು ಮುಂದಾಗಿದೆ.
ಅಂತರ್ಜಾತಿ, ಅಂತರ್ಧರ್ಮೀಯ ವಿವಾಹವಾದ ದಂಪತಿಗಳಿಗೆ 50 ಸಾವಿರ ರೂಪಾಯಿ ನೀಡಲು ಉತ್ತರಾಖಂಡ್ ಸರ್ಕಾರ ತೀರ್ಮಾನಿಸಿದೆ. ವಿವಾಹದ ಹೆಸರಿನಲ್ಲಿ ಮಹಿಳೆಯರ ಧಾರ್ಮಿಕ ಮತಾಂತರವನ್ನು ತಡೆಯಲು ಕಾನೂನು ರೂಪಿಸುವ ಕುರಿತು ಬಿಜೆಪಿ ಆಡಳಿತದ ರಾಜ್ಯಗಳು ಚಿಂತನೆ ನಡೆಸಿದೆ. ಇದರ ನಡುವೆ ಅಂತಹ ಮದುವೆಗಳನ್ನು ಉತ್ತೇಜಿಸಲು ಉತ್ತರಾಖಂಡ್ ಸರ್ಕಾರ ಆರ್ಥಿಕ ನೆರವು ನೀಡಲಿದೆ.
ಎಲ್ಲಾ ಕಾನೂನುಬದ್ಧವಾಗಿ ನೋಂದಾಯಿತ ಅಂತರ್ಧರ್ಮೀಯ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಸಂವಿಧಾನದ 341 ನೇ ಪರಿಚ್ಛೇದದ ಪ್ರಕಾರ, ಸಂಗಾತಿಯಲ್ಲಿ ಒಬ್ಬರು ಪರಿಶಿಷ್ಟಜಾತಿಯವರಾಗಿರಬೇಕು ಎಂದು ಹೇಳಲಾಗಿದೆ.
ರಾಷ್ಟ್ರೀಯ ಏಕತೆಯ ಮನೋಭಾವವನ್ನು ಉತ್ತೇಜಿಸಲು ಇದು ನೆರವಾಗುತ್ತದೆ ಎಂದು ತೆಹ್ರಿ ಸಮಾಜ ಕಲ್ಯಾಣ ಅಧಿಕಾರಿ ದೀಪಂಕರ್ ಘೀಲ್ಡಿಯಾಲ್ ಹೇಳಿದ್ದಾರೆ. ಅರ್ಹ ದಂಪತಿಗಳು ಮದುವೆಯಾದ ಒಂದು ವರ್ಷದವರೆಗೆ ನಗದು ಪ್ರೋತ್ಸಾಹಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಮೊದಲು ಈ ರೀತಿಯ ಮದುವೆಯಾದ ದಂಪತಿಗೆ 10 ಸಾವಿರ ರೂ. ನೀಡುತ್ತಿದ್ದು, 2014 ರಲ್ಲಿ ಮೊತ್ತವನ್ನು ಹೆಚ್ಚಿಸಲಾಗಿದೆ ಎಂದು ಹೇಳಲಾಗಿದೆ.