ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಬದರಿನಾಥ ರಾಷ್ಟ್ರೀಯ ಹೆದ್ದಾರಿಯೇ ಬಂದ್ ಆಗಿದೆ.
ಭಾರಿ ಭೂಕುಸಿತ ಸಂಭವಿಸಿದ್ದು, ಬೆಟ್ಟ, ಗುಡ್ಡಗಳಿಂದ ಬೃಹತ್ ಬಂಡೆ, ಕಲ್ಲು, ಮಣ್ಣುಗಳು ರಸ್ತೆಗೆ ಉರುಳಿವೆ. ಇದರಿಂದಾಗಿ ಲಂಬಗಡ, ನಂದಪ್ರಯಾಗ, ಸೋನಾಳ, ಬ್ಯಾರೇಜ್ ಕುಂಜ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಸಾಕೋಟ್-ನಂದಪ್ರಯಾಗ್ ನಡುವಿನ ಮಾರ್ಗದಲ್ಲಿಯೂ ಸಂಚಾರ ಬಂದ್ ಆಗಿದೆ. ಆದರೆ ಕಾಮೇದಾ ಬಳಿಯ ಬದರಿನಾಥ ರಾಷ್ಟ್ರೀಯ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಚಮೋಲಿ ಪೊಲಿಸರು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕೇದಾರನಾಥ ಬಳಿ ಲಿಂಚೋಲಿಯಲ್ಲಿನ ಶಿಬಿರದಲ್ಲಿ ಭೂಕುಸಿತ ಸಂಭವಿಸಿ ನೇಪಾಳದ 26 ವರ್ಷದ ಕಲು ಬಹದ್ದೂರ್ ಎಂಬುವವರು ಸಾವನ್ನಪ್ಪಿದ್ದರು. ಅಲ್ಲದೇ ಋಷಿಕೇಶದ ಶಿವಮಂದಿರ ಹಾಗೂ ಮೀರಾನಗರದ ಪ್ರದೇಶಗಳ ಬಳಿ ಹೊಳೆಗಳಲ್ಲಿ ಎರಡು ಶವಗಳು ಪತ್ತೆಯಾಗಿದ್ದವು.