ಉತ್ತರಾಖಂಡದಲ್ಲಿ ಮೇಘಸ್ಪೋಟದಿಂದ ಆದ ಅನಾಹುತ ಅಷ್ಟಿಷ್ಟಲ್ಲ. ರಾಜ್ಯದ ವಿವಿಧ ಭಾಗಗಳಲ್ಲಿ, ಅದರಲ್ಲೂ ಕುಮಾನ್ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮನೆಗಳ ಛಾವಣಿವರೆಗೂ ನೀರು ಆವರಿಸಿದೆ. ಅನೇಕ ಮನೆಗಳು ಕುಸಿದಿವೆ. ಭಾರಿ ಮಳೆಯಿಂದ 34 ಜನರು ಸಾವನ್ನಪ್ಪಿದ್ದಾರೆ. ವಾಹನಗಳು ಕೊಚ್ಚಿಹೋಗಿವೆ.
ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪರಿಹಾರ ಘೋಷಣೆ ಮಾಡಿದ್ದಾರೆ. ಮನೆ ಕಳೆದುಕೊಂಡವರಿಗೆ 1.9 ಲಕ್ಷ ರೂಪಾಯಿ, ಜಾನುವಾರು ಕಳೆದುಕೊಂಡವರಿಗೆ ಅಗತ್ಯ ನೆರವಿನ ಭರವಸೆ ನೀಡಲಾಗಿದೆ.
ರಾಜ್ಯದ ಇತರ ಭಾಗಗಳಿಂದ ನೈನಿತಾಲ್ ಸಂಪರ್ಕ ಕಡಿತಗೊಳಿಸಲಾಗಿದೆ. ಸರಣಿ ಭೂಕುಸಿತದಿಂದಾಗಿ ಪ್ರವಾಸಿ ತಾಣಕ್ಕೆ ಹೋಗುವ ಮೂರು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮೇಘಸ್ಫೋಟ ಮತ್ತು ಭೂಕುಸಿತದ ನಂತರ ಮಂಗಳವಾರ ಮಳೆ ಸಂಬಂಧಿತ ಘಟನೆಗಳಲ್ಲಿ 11 ಜನ ಸಾವು ಕಂಡಿದ್ದು, ಅನೇಕ ಜನ ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಭಾರಿ ಮಳೆ ಅಡ್ಡಿಯಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ನೆರವಾಗಲು ಮೂರು ಸೇನಾ ಹೆಲಿಕಾಪ್ಟರ್‌ಗಳು ಶೀಘ್ರದಲ್ಲೇ ಬರಲಿವೆ ಎಂದು ಸಿಎಂ ಧಾಮಿ ಹೇಳಿದ್ದಾರೆ.