
ಡೆಹ್ರಾಡೂನ್: ಹೊರ ರಾಜ್ಯದವರಿಗೆ ಕೃಷಿ ಮತ್ತು ತೋಟಗಾರಿಕೆ ಭೂಮಿ ಮಾರಾಟ ಮಾಡಲು ನಿರ್ಬಂಧ ಹೇರುವ ಹೊಸ ಕಾಯ್ದೆ ರೂಪಿಸಲು ಉತ್ತರಾಖಂಡ ಸರ್ಕಾರ ಮುಂದಾಗಿದೆ. ಈ ಕುರಿತಾದ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಇದೇ ವೇಳೆ ಭೂಮಿ ಖರೀದಿಸುವ ಮೊದಲು ಖರೀದಿದಾರರು ಕಡ್ಡಾಯವಾಗಿ ಅಫಿಡವಿಟ್ ಸಲ್ಲಿಸಬೇಕೆಂಬ ನಿಯಮಕ್ಕೂ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಮೂಲಕ ಉತ್ತರಾಖಂಡ ರಾಜ್ಯದಲ್ಲಿ ಭೂಮಿ ಪರಭಾರೆಗೆ ಅನುಮತಿಸುವ ಸಂಬಂಧ ಜಿಲ್ಲಾ ದಂಡಾಧಿಕಾರಿಗಳಿಗೆ ಇದ್ದ ಅಧಿಕಾರವನ್ನು ಸರ್ಕಾರ ಮೊಟಕುಗೊಳಿಸಿದೆ.
2018ರಲ್ಲಿ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ನೇತೃತ್ವದ ಸರ್ಕಾರ ಜಾರಿಗೊಳಿಸಿದ್ದ ನಿಯಮಗಳನ್ನು ರದ್ದು ಮಾಡಲಾಗಿದೆ. ಬುಧವಾರದಿಂದ ಆರಂಭವಾಗಿರುವ ಬಜೆಟ್ ಅಧಿವೇಶನದಲ್ಲಿ ಹೊಸ ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲು ಉದ್ದೇಶಿಸಲಾಗಿದೆ.
ಹೊಸ ಕಾಯ್ದೆಯ ಪ್ರಕಾರ ಹರಿದ್ವಾರ ಮತ್ತು ಉಧಾಮ್ ಸಿಂಗ್ ನಗರ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರೆ 11 ಜಿಲ್ಲೆಗಳಲ್ಲಿ ಹೊರ ರಾಜ್ಯದವರು ಕೃಷಿ, ತೋಟಗಾರಿಕೆ ಭೂಮಿ ಖರೀದಿಸಲು ಅವಕಾಶ ಇರುವುದಿಲ್ಲ. ಗುಡ್ಡಗಾಡು ಪ್ರದೇಶದಲ್ಲಿ ಭೂ ಅತಿಕ್ರಮಣ ತಡೆ, ಭೂ ನಿಗದಿತ ಉದ್ದೇಶಕ್ಕೆ ಮಾತ್ರ ಭೂಮಿ ಬಳಕೆ ಖಚಿತ ಪಡಿಸುವುದು, ರಾಜ್ಯದಲ್ಲಿ ಭೂಮಿಯ ಬೆಲೆ ಅಸಹಜ ಏರಿಕೆಯಿಂದ ಸ್ಥಳೀಯರಿಗೆ ಆಗುವ ತೊಂದರೆ ತಪ್ಪಿಸುವುದು ಈ ಕಾಯ್ದೆ ಉದ್ದೇಶವಾಗಿದೆ ಎಂದು ಹೇಳಲಾಗಿದೆ.