ಉತ್ತರಾಖಂಡದ ಚಕ್ರತಾ ಪ್ರದೇಶದಲ್ಲಿ ಬುಧವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಕ್ರತಾದ ತ್ಯುನಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು 500 ಮೀಟರ್ ಆಳದ ಕಮರಿಗೆ ಕಾರ್ ಉರುಳಿ ಬಿದ್ದು ಆರು ಮಂದಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿವೆ. ಮೃತರು ಹಿಮಾಚಲ ಪ್ರದೇಶದ ನಿವಾಸಿಗಳು ಎಂದು ಹೇಳಲಾಗಿದೆ.
ಕಾರ್ ನಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 7 ಮಂದಿ ಪಂದ್ರಾನುದಿಂದ ಹಿಮಾಚಲ ಪ್ರದೇಶದ ತ್ಯುನಿಗೆ ಪ್ರಯಾಣಿಸುತ್ತಿದ್ದರು. ಅವರು ತ್ಯುನಿ ಅಟಲ್ ಮೋಟಾರು ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ಎಸ್‌ಡಿಆರ್‌ಎಫ್ ತಂಡವು ತ್ಯುನಿ ಪೊಲೀಸ್ ಠಾಣೆಯೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಹಲವಾರು ಗಂಟೆಗಳ ಕಠಿಣ ಪರಿಶ್ರಮದ ನಂತರ ರಕ್ಷಣಾ ತಂಡವು ಆಳವಾದ ಕಂದಕದಿಂದ 2 ಮಹಿಳೆಯರು ಮತ್ತು 2 ಮಕ್ಕಳು ಸೇರಿದಂತೆ 6 ಜನರ ಮೃತದೇಹಗಳನ್ನು ಹೊರತೆಗೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿಯನ್ನು ರಕ್ಷಣಾ ತಂಡ ಆಳವಾದ ಕಂದಕದಿಂದ ಹೊರತೆಗೆದು ಡೆಹ್ರಾಡೂನ್ ಹೈಯರ್ ಸೆಂಟರ್‌ಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಈ ಅಪಘಾತದಲ್ಲಿ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಸಿಎಂ ಧಾಮಿ ಸಂತಾಪ
ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಟಲ್-ತ್ಯುನಿ ಮೋಟಾರುಮಾರ್ಗದಲ್ಲಿ(ಚಕ್ರತಾ) ದುರದೃಷ್ಟಕರ ಕಾರು ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ದೇವರು ಅಗಲಿದವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ದುಃಖತಪ್ತ ಕುಟುಂಬಕ್ಕೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಹೇಳಿದ್ದಾರೆ.