![](https://kannadadunia.com/wp-content/uploads/2023/09/lady-police.jpg)
ಲಖನೌ: ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳು ಲಿಂಗ ಬದಲಾವಣೆಗೆ ಅನುಮತಿ ಕೋರಿ ಡಿಜಿಪಿಗೆ ಪತ್ರ ಬರೆದಿದ್ದು, ಈ ಬೆಳವಣಿಗೆ ಪೊಲೀಸ್ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಉತ್ತರ ಪ್ರದೇಶದ ಗೋರಕ್ ಪುರ ಹಾಗೂ ಗೋಂಡಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳು ಲಿಂಗ ಬದಲಾವಣೆ ಪ್ರಕ್ರಿಯೆಗೆ ಒಳಗಾಗಲು ಅನುಮತಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಯುಪಿ ಪೊಲೀಸರು ಇಂಥದ್ದೊಂದು ವಿಶೇಷ ಮನವಿ ಸ್ವೀಕರಿಸಿರುವುದು ಇದೇ ಮೊದಲು.
ಮಹಿಳಾ ಪೊಲೀಸರಾಗಿ ನೇಮಕಗೊಂಡಿರುವ ಈ ಇಬ್ಬರು ಕಾನ್ಸ್ ಟೇಬಲ್ ಗಳಿಗೆ ಲಿಂಗ ಬದಲಾವಣೆಗೆ ಅನುಮತಿ ನೀಡುವುದು ಹೇಗೆ ಎಂಬುದೇ ಪೊಲೀಸ್ ಅಧಿಕಾರಿಗಳ ಮುಂದಿರುವ ಪ್ರಶ್ನೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಪಿ ಪೊಲೀಸ್ ಇಲಾಖೆ ಹೆಚ್ಚುವರಿ ಡೈರೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯೊಬ್ಬರು, ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳು ಲಿಂಗ ಬದಲಾವಣೆಗೆ ಅನುಮತಿ ಕೋರಿದ್ದಾರೆ. ಇಬ್ಬರೂ ವಿಭಿನ್ನ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಲಿಂಗ ಪರಿವರ್ತನೆಗೆ ಅನುಮತಿ ನೀಡಲು ಹಲವು ಸಮಸ್ಯೆಗಳಿವೆ. ಮಹಿಳಾ ಕಾನ್ಸ್ ಟೇಬಲ್ ಗಳು ಶಸ್ತ್ರಚಿಕಿತ್ಸೆ ಬಳಿಕ ಪುರುಷ ಕಾನ್ಸ್ ಟೇಬಲ್ ಗಳು ಎಂದು ಪರಿಗಣಿಸಿದರೆ ಅವರಿಗೆ ಅಗತ್ಯವಿರುವ ದೈಹಿಕ ಮಾನದಂಡಗಳನ್ನು ಪರಿಗಣಿಸುವುದು ಹೇಗೆ? ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಎತ್ತರ, ಓಡುವ ಸಾಮರ್ಥ್ಯ ಹಾಗೂ ಭುಜ ಬಲದಂತಹ ಹಲವು ದೈಹಿಕ ಮಾನದಂಡಗಳಿವೆ. ಪುರುಷ ಹಾಗೂ ಮಹಿಳೆಯರ ನೇಮಕಾತಿ ವೇಳೆ ಪೊಲೀಸ್ ಇಲಾಖೆಯಲ್ಲಿ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತದೆ. ಮಹಿಳಾ ಮಾನದಂಡಗಳ ಅಡಿಯಲ್ಲಿ ಉದ್ಯೋಗ ಪಡೆದ ನತರ ಲಿಂಗ ಬದಲಾಯಿಸುವ ಮಹಿಳಾ ಸಿಬ್ಬಂದಿಯು ಮಾನದಂಡಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಈ ವರ್ಷದ ಜನವರಿಯಿಂದ ಈ ಪ್ರಕರಣ ನಡೆಯುತ್ತಿದೆ. ಲಿಂಗ ಬದಲಾವಣೆಗೆ ಅನುಮತಿ ಪಡೆಯಲು ವಿಫಲರಾದ ಬಳಿಕ ಒಬ್ಬರು ಕಾನ್ಸ್ ಟೇಬಲ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಡಿಜಿಪಿ ಕಚೇರಿ ಅಲಹಾಬಾದ್ ಕೋರ್ಟ್ ನಲ್ಲಿ ಇದೇ ಉತ್ತರ ಸಲ್ಲಿಸಿದೆ. ಮೆರಿಟ್ ಆಧಾರದಡಿ ಮಹಿಳಾ ಕಾನ್ಸ್ ಟೇಬಲ್ ಗಳ ಕೋರಿಕೆಯನ್ನು ಮತ್ತೊಮ್ಮೆ ಮರುಪರಿಶೀಲನೆ ಮಾಡುವಂತೆ ಕೋರ್ಟ್ ಪೊಲೀಸ್ ಪ್ರಧಾನ ಕಚೇರಿಗೆ ಹೇಳಿದೆ. ಭವಿಷ್ಯದಲ್ಲಿ ಮತ್ತೆ ಬರಬಹುದಾದ ಇಂತಹ ಪ್ರಕರಣಗಳಿಗೆ ಕೆಲವು ಮಾನದಂಡ ಸಿದ್ಧಪಡಿಸುವಂತೆ ಸೂಚಿಸಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.