ಇಟಾವಾ: ಸಿಬಿಎಸ್ಇ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ ವೇಳೆ ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ, ಕಾಲುಂಗುರ, ಬಳೆಗಳನ್ನು ತೆಗೆಸಿ ಪರೀಕ್ಷೆ ಬರೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದೀಗ ಉತ್ತರ ಪ್ರದೇಶದಲ್ಲಿ ಹೊಸ ವಿವಾದ ಶುರುವಾಗಿದ್ದು, ಸಿಟಿಇಟಿ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್-ಸಿಬಿಎಸ್ಇ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ (CTET) ಭಾನುವಾರ ಆಯೋಜಿಸಿತ್ತು. ಪರೀಕ್ಷಾರ್ಥಿಗಳು ಯಾವುದೇ ಆಭರಣ ಧರಿಸಿ ಬರುವುದನ್ನು ನಿಷೇಧಿಸಲಾಗಿತ್ತು. ಇದಕ್ಕೆ ಮಹಿಳಾ ಅಭ್ಯರ್ಥಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಪರೀಕ್ಷೆಗೆ ಬಂದಿದ್ದ ಕೆಲ ಮಹಿಳಾ ಅಭ್ಯರ್ಥಿಗಳ ಮಾಂಗಲ್ಯ ಸರ, ಕಾಲುಂಗುರ, ಬಳೆಗಳನ್ನು ತೆಗೆಸಿರುವ ಪರೀಕ್ಷಾ ಕೇಂದ್ರ ಸಿಬ್ಬಂದಿಗಳು, ಆನಂತರ ಪರೀಕ್ಷೆಗೆ ಹಾಜರಾಗಲು ಬಿಟ್ಟಿದ್ದಾರೆ. ಇದರಿಂದ ಸಿಬ್ಬಂದಿಗಳ ಕಾರ್ಯವೈಖರಿಗೆ ಪರೀಕ್ಷಾರ್ಥಿಗಳು, ಪೋಷಕರು ಕಿಡಿಕಾರಿದ್ದಾರೆ.
ಮದುವೆ ಬಳಿಕ ಮಾಂಗಲ್ಯ ಸರ, ಕಾಲುಂಗುರ ತೆಗೆಯುವುದು ಸಂಪ್ರದಾಯವಲ್ಲ, ಆದರೆ ಸಂಪ್ರದಾಯಕ್ಕೆ ವಿರುದ್ಧವಾಗಿ, ಬಲವಂತವಾಗಿ ಮಾಂಗಲ್ಯ ಸರ, ಕಾಲುಂಗುರ, ಕೈ ಬಳೆಗಳನ್ನು ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅವಾಕಾಶ ಕೊಟ್ಟಿರುವುದು ಖಂಡನೀಯ. ಪರೀಕ್ಷಾ ಕೇಂದ್ರದ ಈ ನಿಯಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.