ಲಖನೌ: ವರುಣಾರ್ಭಟಕ್ಕೆ ಉತ್ತರ ಪ್ರದೇಶ ನಲುಗಿದ್ದು, ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದೆ. 700ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಉತ್ತರ ಪ್ರದೇಶದ 8 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, 700ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಿವೆ. ಮಳೆ ಅವಾಂತರಕ್ಕೆ ಈವರೆಗೆ 11 ಜನರು ಸಾವನ್ನಪ್ಪಿದ್ದಾರೆ.
6 ಜನರು ಪ್ರವಾಹದ ಅಬ್ಬರಕ್ಕೆ ಸಿಲುಕಿ ಸಾವನ್ನಪ್ಪಿದ್ದರೆ, ಸಿಡಿಲ ಹೊಡೆತ ಹಾಗೂ ಹಾವು ಕಡಿತದಿಂದ ತಲಾ ಇಬ್ಬರು ಸಾವನ್ನಪ್ಪಿದ್ದಾರೆ. ಓರ್ವ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದಾಗಿ 17 ಜಿಲ್ಲೆಗಳ 732 ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಲಖನೌ-ಬರೇಲಿ ಹೆದ್ದಾರಿಯ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಜನರಿಗಾಗಿ ಪ್ರವಾಹ ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, ನೆರೆಯಿಂದ ತತ್ತರಿಸಿರುವ ಗ್ರಾಮಸ್ಥರನ್ನು ರಕ್ಷಿಸಿವ ಕಾರ್ಯ ನಡೆಯುತ್ತಿದೆ. ಕಳೆದ ನಾಲ್ಕು ದಿನಗಳಿಂದ ರಾಜ್ಯದ 44 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಜೂನ್ 1ರಿಂದ ಈವರೆಗೆ ಉತ್ತರ ಪ್ರದೇಶದಲ್ಲಿ 218.4ಮಿ.ಮೀ ಮಳೆಯಾಗಿದೆ. ಇದು ಸಾಮಾನ್ಯಕ್ಕಿಂತ ಶೇ.21ರಷ್ಟು ಹೆಚ್ಚು ಮಳೆಯಾಗಿದೆ.