ಕಾರವಾರ: ಉತ್ತರ ಕನ್ನಡ ಲೋಕಸಭಾ ಅಖಾಡ ತೀವ್ರ ಕುತೂಹಲ ಮೂಡಿಸಿದೆ. ಬಿಜೆಪಿ ಟಿಕೆಟ್ ಗಾಗಿ ಸ್ವಪಕ್ಷದ ನಾಯಕರ ನಡುವೆಯೇ ಪೈಪೋಟಿ ಆರಂಭವಾಗಿದೆ. ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಬದಲಾಗಿ ಈಬಾರಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ನೀಡಬೇಕು ಎಂದು ರಾಜ್ಯ ನಾಯಕರು ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ಗೆ ರವಾನಿಸಿದ್ದಾರೆ. ಆದರೆ ಅನಂತ್ ಕುಮಾರ್ ಹೆಗಡೆ ಈ ಬಾರಿಯೂ ತಮಗೆ ಟಿಕೆಟ್ ಸಿಗಲಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯೆ ನೀಡಿದ್ದು, ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ಮಾಡಲಾಗಿದೆ. ಬಿಜೆಪಿ 370 ಕ್ಕೂ ಹೆಚ್ಚು ಸೀಟು ಗೆಲ್ಲಬೇಕು ಎಂಬುದು ಪ್ರಧಾನಿ ಮೋದಿ ಗುರಿ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲುವ ಪ್ರಯತ್ನ ನಡೆದಿದೆ. ಈ ಬಾರಿ ಲೋಕಸಭೆ ಟಿಕೆಟ್ ನನಗೆ ಸಿಗುವ ವಿಸ್ವಾಸವಿದೆ ಎಂದು ಹೇಳಿದ್ದಾರೆ.
ಈ ನಡುವೆ ಸಂಸದ ಅನಂತ್ ಕುಮರ್ ಹೆಗಡೆ, ಉತ್ತರ ಕನ್ನಡ ಕ್ಷೇತ್ರವನ್ನು ಈ ಬಾರಿ ದಾಖಲೆ ಮತಗಳ ಅಂತರದಿಂದ ಗೆಲ್ಲುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ನಡೆದಿದೆ. ವರಿಷ್ಠರ ಯೋಚನೆಯಂತೆ ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾವು ಬದ್ಧ. ರಾಜ್ಯ ಸಮಿತಿ ನೀಡಿರುವ ಪಟ್ಟಿಯಲ್ಲಿ ಕಾಗೇರಿ ಹೆಸರಿದ್ದರೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಆಂತರಿಕವಾಗಿ ಚರ್ಚೆ ಮಾಡಲಾಗುತ್ತದೆ. ಸಾಮಾನ್ಯ ಕಾರ್ಯಕರ್ತರ ಅಭಿಪ್ರಾಯ ಕೂಡ ಸಂಗ್ರಿಹಿಸಲಾಗುತ್ತದೆ. ಈಗಗಲೇ ಅಭಿಪ್ರಾಯ ವರಿಷ್ಠರಿಗೆ, ಪ್ರಧಾನಿ ಮೋದಿಯವರಿಗೆ ತಲುಪಿದೆ. ಅದರ ಆಧಾರದ ಮೇಲೆ ನಿರ್ಧರಿಸುತ್ತಾರೆ ಎಂದಿದ್ದಾರೆ.