ಉತ್ತರ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಹಲವೆಡೆ ನದಿಗಳ ಅಬ್ಬರಕ್ಕೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ.
ರಸ್ತೆಗಳ ಮೇಲೆ ನದಿ ನೀರು ಉಕ್ಕಿ ಹರಿಯುತ್ತಿದ್ದರೂ ಬಸ್ ಚಾಲಕನೊಬ್ಬ ಸಾಹಸ ಮಾಡಲು ಹೋಗಿ ಬಸ್ ನದಿ ಮಧ್ಯೆ ಸಿಲುಕಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.
ಕುಮಟಾ ತಾಲೂಕಿನ ಕಟಗಾಲ ಗ್ರಾಮದಲ್ಲಿ ಚಂಡಿಕಾ ಹೊಳೆ ಪ್ರವಾಹದ ನಡುವೆಯೂ ಬಸ್ ಚಾಲಕ ಬಸ್ ಮೂಲಕ ಹೊಳೆ ದಾಟಲು ಮುಂದಾಗಿದ್ದಾನೆ. ಪ್ರಯಾಣಿಕರನ್ನು ಹೊತ್ತಿದ್ದ ಬಸ್ ಉಕ್ಕಿ ಹರಿಯುತ್ತಿದ್ದ ಹೊಳೆಯಲ್ಲಿ ನಿಂತುಬಿಟ್ಟಿದೆ. ರಭಸವಾಗಿ ಹರಿಯುತ್ತಿರುವ ನೀರಿನ ನಡುವೆ ಬಸ್ ನಿಂತು ಹೋಗಿದ್ದು, ಪ್ರಯಾಣಿಕರು ಕಂಗಾಲಾಗಿದ್ದಾರೆ.
ಪ್ರಯಾಣಿಕರ ಜೀವಕ್ಕೂ ಅಪಾಯತಂದೊಡ್ಡುವ ಸ್ಥಿತಿ ತಂದ ಬಸ್ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಂಡಿಕಾ ಹೊಳೆ ತುಂಬಿ ಹರಿಯುತ್ತಿದ್ದು, ಸುತ್ತಮುತ್ತ ಪ್ರದೇಶ, ರಸ್ತೆಗಳು ಜಲಾವೃತಗೊಂಡಿವೆ. ಇಂತಹ ಪ್ರವಾಹ ಸ್ಥಿತಿ ಮಧ್ಯೆಯೂ ಚಾಲಕ ಹುಚ್ಚಾಟ ಮೆರೆದಿದ್ದಾನೆ. ಘಟನಾ ಸ್ಥಳಕ್ಕೆ ಸ್ಥಳೀಯರು ದೌಡಾಯಿಸಿದ್ದು, ನಿಧಾನವಾಗಿ ಬಸ್ ಬಳಿ ತೆರಳಿ ಬಸ್ ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.