ಹೊನ್ನಾವರ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ ಘಟನೆ ಮಾಸುವ ಮುನ್ನವೇ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅಮಾನವೀಯ ಘಟನೆ ನಡೆದಿದ್ದು, ಗರ್ಭ ಧರಿಸಿದ್ದ ಹಸುವಿನ ರುಂಡವನ್ನೇ ಕತ್ತರಿಸಿರುವ ದುರುಳರು ದೇಹವನ್ನು ಕೊಂಡೊಯ್ದಿರುವ ಘಟನೆ ನಡೆದಿದೆ.
ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ನಿನ್ನೆ ಮೇವಿಗಾಗಿ ಬಿಟ್ಟಿದ್ದ ಹಸು ರಾತ್ರಿಯಾದರೂ ಬಂದಿರಲಿಲ್ಲ. ಬೆಳಿಗ್ಗೆ ಹಸುವಿಗಾಗಿ ಮಾಲೀಕ ಕೃಷ್ಣ ಆಚಾರ್ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹಸುವಿನ ರಕ್ತ, ಕಾಲು, ರುಂಡ ಪತ್ತೆಯಾಗಿದೆ.
ದುರುಳರು ಹಸುವಿನ ರುಂಡ ಬೇರ್ಪಡಿಸಿ, ಕಾಲು ಕತ್ತರಿಸಿ, ದೇಹವನ್ನು ಹೊತ್ತೊಯ್ದಿದ್ದಾರೆ. ಭಕ್ಷಣೆಗಾಗಿ ಹಸುವಿನ ಮಾಂಸವನ್ನು ಕೊಂಡೊಯ್ದಿರುವ ಸಾಧ್ಯತೆ ಇದೆ ಎಂದು ಕೃಷ್ಣ ಆಚಾರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಗೋ ಮಾತೆಯಾದಂತಹ ಹಸುವಿನ ಮೇಲೆ ದುಷ್ಕರ್ಮಿಗಳು ಇಂತಹ ಅಟ್ಟಹಾಸ ಮೆರೆಯುತ್ತಿರುವುದು ರಾಜ್ಯದಲ್ಲಿ ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.