ಹೊನ್ನಾವರ: ಗರ್ಭ ಧರಿಸಿದ್ದ ಹಸುವನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸರು ಐವರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನಾವರ ತಾಲುಕಿನ ಸಾಲ್ಕೋಡು ಗ್ರಾಮದಲ್ಲಿ ಕೃಷ್ಣ ಆಚಾರ್ ಎಂಬುವವರ ಹಸುವನ್ನು ದುಷ್ಕರ್ಮಿಗಳು ಕಡಿದಿದ್ದರು. ಮೇವಿಗೆ ಬಿಟ್ಟಿದ್ದ ಹಸು ವಾಪಾಸ್ ಆಗದಿದ್ದಾಗ ಕೃಷ್ಣ ಆಚಾರ್ ಕುಟುಂಬ ಹಸು ಹುಡುಕಾಟ ನಡೆಸಿತ್ತು. ಈ ವೇಳೆ ಹಸುವಿನ ರುಂಡ ಬೇರ್ಪಡಿಸಿ ಕಾಲು ಕತ್ತರಿಸಿ, ದೇಹವನ್ನು ಹೊತ್ತೊಯ್ದಿರುವುದು ಬೆಳಕಿಗೆ ಬಂದಿತ್ತು. ಘಟನೆ ಬೆನ್ನಲ್ಲೇ ಸಾಲ್ಕೋಡು ಗ್ರಾಮದಲ್ಲಿ ಕಳೆದ ಒಂದು ತಿಂಗಳಲ್ಲಿ ಸುಮಾರು 15 ಹಸುಗಳು ನಾಪತ್ತೆಯಾಗಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು.
ಹಸು ಕಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಳೆದ ಮೂರು ದಿನಗಳಿಂದ ಸತತ ಕಾರ್ಯಾಚರಣೆ ನಡೆಸಿ ಐವರು ಶಂಕಿತರನ್ನು ಬಂಧಿಸಿದ್ದಾರೆ. ಅಲ್ಲದೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ, ಸ್ಥಳೀಯ ಅಧಿಕಾರಿಗಳ ಜೊತೆ ಸಭೆ ಸಭೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.