ಕಾರವಾರ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿ ರಾಷ್ಟ್ರಧ್ವಜ ಹಾರಿಸಿರುವ ಬೆನ್ನಲ್ಲೇ ಇದೀಗ ಉತ್ತರ ಕನ್ನಡ ಜಿಲ್ಲೆಗೂ ಧ್ವಜ ವಿವಾದ ಕಾಲಿಟ್ಟಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದಲ್ಲಿ ಸಮುದ್ರದಡದ ಬಳಿ ವೀರ ಸಾವರ್ಕರ್ ವೃತದಲ್ಲಿದ್ದ ಭಗವಾ ಧ್ವಜ ಹಾಗೂ ಧ್ವಜ ಕಟ್ಟೆಯನ್ನೇ ತೆರವುಗೊಳಿಸಿರುವ ಘಟನೆ ನಡೆದಿದೆ.
ಗ್ರಾಮ ಪಂಚಾಯಿತಿ ಪಿಡಿಒ ಏಕಾಏಕಿ ಜೆಸಿಬಿ ಮೂಲಕ ನಾಮಫಲಕ ತೆರವು ಮಾಡಿದ್ದಾರೆ. ಅಲ್ಲದೇ ಧ್ವಜಕಟ್ಟೆಯನ್ನೇ ಇದ್ದಕ್ಕಿದ್ದಂತೆ ತೆರವು ಮಾಡಿರುವುದು ಬಿಜೆಪಿ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಭಗವಾಧ್ವಜ ಹಾಗೂ ಧ್ವಜ ಕಟ್ಟೆಯನ್ನು ತೆರವು ಮಾಡಿರುವುದನ್ನು ಖಂಡಿಸಿ ಬಿಜೆಪಿ ನಾಯಕರು ಹಾಗೂ ಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.