
ಭಗವಾನ್ ಶ್ರೀ ಕೃಷ್ಣನನ್ನು ಆರಾಧಿಸುತ್ತಿದ್ದ ಶಿಕ್ಷಕಿಯೊಬ್ಬರು ಶ್ರೀ ಕೃಷ್ಣನ ವಿಗ್ರಹದೊಂದಿಗೆ ಸಂಪ್ರದಾಯಬದ್ಧವಾಗಿ ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದ ಔರಿಯಾ ಜಿಲ್ಲೆಯಲ್ಲಿ ನಡೆದಿದೆ. ಈ ವಿವಾಹದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿವೃತ್ತ ಶಿಕ್ಷಕ ರಂಜಿತ್ ಸಿಂಗ್ ಸೋಲಂಕಿ ಎಂಬವರ ಪುತ್ರಿ 30 ವರ್ಷದ ರಕ್ಷಾ ಪದವೀಧರೆಯಾಗಿದ್ದು, ಈಗ ಎಲ್ ಎಲ್ ಬಿ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀ ಕೃಷ್ಣನನ್ನು ಆರಾಧಿಸುತ್ತಿದ್ದ ಅವರು ಜೀವನಪೂರ್ತಿ ಶ್ರೀ ಕೃಷ್ಣನ ಜೊತೆ ಕಳೆಯಲು ಈ ತೀರ್ಮಾನ ಕೈಗೊಂಡಿದ್ದಾರೆ.
ಅವರ ಈ ನಿರ್ಧಾರಕ್ಕೆ ತಂದೆ ರಂಜಿತ್ ಸಿಂಗ್ ಸೋಲಂಕಿ ಸಹ ಸಮ್ಮತಿಸಿದ್ದು, ಬಂಧು ಬಳಗದವರನ್ನು ಆಹ್ವಾನಿಸಿ ಅದ್ದೂರಿಯಾಗಿ ವಿವಾಹ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಗಮಿಸಿದ ಅತಿಥಿಗಳಿಗೆ ಔತಣಕೂಟ ಸಹ ನೀಡಲಾಗಿದೆ.
ವಿವಾಹದ ಬಳಿಕ ಸಂಬಂಧಿಕರ ಮನೆಗೆ ತೆರಳಿದ್ದ ರಕ್ಷಾ ಬಳಿಕ ವಾಪಸ್ ತಮ್ಮ ತವರು ಮನೆಗೆ ಶ್ರೀಕೃಷ್ಣನ ವಿಗ್ರಹವನ್ನು ಕಂಕುಳಲ್ಲಿ ಇಟ್ಟುಕೊಂಡು ಬಂದಿದ್ದಾರೆ. ಈ ವಿವಾಹದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.