ಹಾಡಹಗಲೇ ಕಿಕ್ಕಿರಿದು ತುಂಬಿದ್ದ ಮಾರುಕಟ್ಟೆಯಲ್ಲೇ ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಹರಾಪುರ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು 32 ವರ್ಷದ ಶೌಕತ್ ಅಲಿ ಎಂದು ಗುರುತಿಸಲಾಗಿದೆ. ಬೆಚ್ಚಿ ಬೀಳಿಸುವ ಘಟನೆಯ ವಿಡಿಯೋ ಹಾಗೂ ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಲ್ಲಿ ಆರೋಪಿ ಹರೂನ್ ಅಹಮದ್ ಖಾನ್ ಎಂಬಾತ ಅಲಿಯ ಬಳಿಗೆ ನಡೆದುಕೊಂಡು ಬರುತ್ತಿರೋದನ್ನು ಕಾಣಬಹುದಾಗಿದೆ. ಬಿಳಿ ಬಣ್ಣದ ಶರ್ಟ್ ಧರಿಸಿರುವ ಅಹಮದ್ ಸ್ಥಳೀಯ ಆಭರಣ ವ್ಯಾಪಾರಿಯಾಗಿದ್ದ ಅಲಿಯ ಬಳಿ ನುಗ್ಗಿ ಚಾಕುವಿನಿಂದ ಆತನ ಕತ್ತನ್ನು ಪದೇ ಪದೇ ಸೀಳಿದ್ದಾನೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ವಿಡಿಯೋ ತುಣುಕಿನಲ್ಲಿ ಅಹ್ಮದ್ ಚಾಕುವಿನಿಂದ ಅಲಿ ಮೇಲೆ ಹಲ್ಲೆ ಮಾಡುತ್ತಿರೋದನ್ನು ಕಂಡು ಆಟೋ ಚಾಲಕ ಸ್ಥಳದಿಂದ ಓಡಿ ಹೋಗುತ್ತಿರೋದನ್ನು ಕಾಣಬಹುದಾಗಿದೆ. ಈ ಪ್ರಕರಣ ಸಂಬಂಧ ಮಾತನಾಡಿದ ಎಸ್ಪಿ ರಾಜೇಶ್ ಕುಮಾರ್, ಹರೂನ್ ಅಹಮದ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಶೌಕತ್ ಅಲಿಯ ಕೊಲೆಗೆ ಸ್ಕೆಚ್ ಹಾಕಿದ್ದಾಗಿ ಅಹಮದ್ ತಪ್ಪೊಪ್ಪಿಕೊಂಡಿದ್ದಾನೆ. ಶೌಕತ್ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ ನಾನು ಆತನನ್ನು ಕೊಲೆ ಮಾಡಿದ್ದೇನೆ ಎಂದು ಅಹಮದ್ ಹೇಳಿದ್ದಾನೆ ಎಂದು ಮಾಹಿತಿ ನೀಡಿದ್ರು.