ಭಾರತದಲ್ಲಿ ಕ್ರಿಕೆಟ್ ಗೆ ನೀಡುವ ಪ್ರಾಮುಖ್ಯತೆ ಇತರೆ ಕ್ರೀಡೆಗಳಿಗೆ ಸಿಗುವುದಿಲ್ಲ. ಕ್ರಿಕೆಟ್ ಆಟಗಾರನೊಬ್ಬ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ವೇಳೆ ದುಡ್ಡಿನ ಹೊಳೆಯೇ ಹರಿದು ಬರುತ್ತದೆ. ಹೀಗಾಗಿಯೇ ಬಿಸಿಸಿಐ ಅತ್ಯಂತ ಶ್ರೀಮಂತ ಕ್ರಿಕೆಟ್ ಬೋರ್ಡ್ ಎಂದು ಪರಿಗಣಿಸಲಾಗಿದೆ.
ಇತರೆ ಆಟಗಾರರನ್ನು ಯಾವ ರೀತಿ ನಿರ್ಲಕ್ಷಿಸುತ್ತಾರೆ ಎಂಬುದಕ್ಕೆ ಇಲ್ಲೊಂದು ಆಘಾತಕಾರಿ ಉದಾಹರಣೆ ಇದೆ. ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಮೂರು ದಿನಗಳ ಕಾಲ 17 ವರ್ಷದೊಳಗಿನವರ ರಾಜ್ಯ ಮಟ್ಟದ ಕಬ್ಬಡಿ ಟೂರ್ನಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಆಟಗಾರರಿಗೆ ಟಾಯ್ಲೆಟ್ ನಲ್ಲಿ ಇಟ್ಟಿದ್ದ ಆಹಾರವನ್ನು ಬಡಿಸಲಾಗಿದೆ.
ಇದರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆದರೆ ಸಹರಾನ್ಪುರ್ ಕ್ರೀಡಾ ಅಧಿಕಾರಿ ಇದನ್ನು ತಳ್ಳಿ ಹಾಕಿದ್ದಾರೆ. ಆಟಗಾರರಿಗೆ ಅತ್ಯುತ್ತಮ ಗುಣಮಟ್ಟದ ಆಹಾರ ವಿತರಿಸಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಆದರೆ ಆಟಗಾರರು ಈ ಹೇಳಿಕೆಯನ್ನು ವಿರೋಧಿಸಿದ್ದು, ನಮ್ಮಗಳಿಗೆ ನೀಡಲಾಗಿದ್ದ ಆಹಾರ ಗುಣಮಟ್ಟದಲ್ಲಿರಲಿಲ್ಲ. ಅಲ್ಲದೆ ಆಹಾರ ತಯಾರಿಗೆ ಸ್ಥಳಾವಕಾಶ ಇಲ್ಲವೆಂಬ ಕಾರಣಕ್ಕೆ ಟಾಯ್ಲೆಟ್ ಪಕ್ಕದ ಜಾಗದಲ್ಲಿಯೇ ಇದನ್ನು ತಯಾರಿಸಲಾಗಿದೆ ಎಂದು ಆರೋಪಿಸಿದ್ದಾರೆ.