ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯೊಬ್ಬರನ್ನು ಅಮಾನುಷವಾಗಿ ಥಳಿಸುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕಾನ್ಪುರದಲ್ಲಿ ನಡೆದಿದೆ ಎನ್ನಲಾದ ವಿಡಿಯೋವನ್ನ ಸಮಾಜವಾದಿ ಪಕ್ಷದ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ.
ಕಾನ್ಪುರದ ಕಾಕ್ವಾನ್ ಪ್ರದೇಶದಲ್ಲಿ ಸಬ್-ಇನ್ಸ್ಪೆಕ್ಟರ್ ಎಂದು ನಂಬಲಾದ ಪೊಲೀಸ್ ಅಧಿಕಾರಿಯು ಮಹಿಳೆಯನ್ನ ನಿಷ್ಕರುಣೆಯಿಂದ ಥಳಿಸಿ ದೌರ್ಜನ್ಯ ನಡೆಸುತ್ತಿರುವುದಾಗಿ ಕಂಡುಬಂದಿದೆ. ಈ ವೇಳೆ ಮಹಿಳೆ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವುದನ್ನು ಮತ್ತು ನೋವಿನಿಂದ ಕೂಗುತ್ತಿರುವುದನ್ನು ಎರಡು ನಿಮಿಷಗಳಷ್ಟು ದೀರ್ಘವಾದ ವಿಡಿಯೋ ತೋರಿಸುತ್ತದೆ.
ಮಹಿಳೆಯ ಮೇಲೆ ಹಲ್ಲೆ ವಿಡಿಯೋವನ್ನ ರೆಕಾರ್ಡ್ ಮಾಡಿಕೊಳ್ಳಲಾಗುತ್ತಿದೆ ಎಂದು ಪೊಲೀಸ್ ತಿಳಿದಿದ್ರೂ ತನ್ನನ್ನು ಸಮರ್ಥಿಸಿಕೊಳ್ಳುತ್ತಾ ಮಹಿಳೆಯನ್ನು ಥಳಿಸುತ್ತಲೇ ಇದ್ದಾರೆ.
ಸಮಾಜವಾದಿ ಪಕ್ಷವು ಘಟನೆಯನ್ನು ಖಂಡಿಸಿದ್ದು ಪೊಲೀಸ್ ಅಧಿಕಾರಿಯ ಮೇಲೆ ತನಿಖೆಗೆ ಒತ್ತಾಯಿಸಿದೆ. “ಕಕ್ವಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಬ್ ಇನ್ಸ್ಪೆಕ್ಟರ್ ಹುಡುಗಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ, ಅವಳನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಯೋಗಿ ಸರ್ಕಾರದ ದೈನಂದಿನ ಪೊಲೀಸ್ ದೌರ್ಜನ್ಯದ ಘಟನೆಗಳು ಕಣ್ಣ ಮುಂದೆ ಬರುತ್ತಿವೆ, ಮುಖ್ಯಮಂತ್ರಿ ಮೌನವಾಗಿದ್ದಾರೆ. ಪ್ರಕರಣದ ತನಿಖೆ ನಡೆಸಿ ಆರೋಪಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಂದಿದೆ.