
ಲಖ್ನೋ: ಉತ್ತರ ಪ್ರದೇಶದ ಲಖ್ನೋದ ಗೋಸೈಗಂಜ್ ಪ್ರದೇಶದಲ್ಲಿ ಕಟ್ಟಡವೊಂದರ ಎಂಟನೇ ಮಹಡಿಯ ಬಾಲ್ಕನಿಯಿಂದ ತನ್ನ 32 ವರ್ಷದ ಹೆಂಡತಿಯನ್ನು ಬಾಲ್ಕನಿಯಿಂದ ತಳ್ಳಿ ಕೊಂದ 36 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ವರದಿಗಳ ಪ್ರಕಾರ, ಸಂಜೀವ್ ಕುಮಾರ್ ಎಂದು ಗುರುತಿಸಲಾದ ಬಂಧಿತನ ವಿವಾಹೇತರ ಸಂಬಂಧವು ಅಪರಾಧಕ್ಕೆ ಕಾರಣವಾಗಿದೆ.
ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಸಂಜೀವ್ ಕುಮಾರ್, 2011 ರಲ್ಲಿ ನೀತು ಅವರನ್ನು ವಿವಾಹವಾದರು. ಇಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು. ಅಂತಹ ಒಂದು ಜಗಳ ಭಾನುವಾರ ಅವರ ನಡುವೆ ಪ್ರಾರಂಭವಾಗಿದ್ದು ಜಗಳದ ವೇಳೆ ಸಂಜೀವ್ ಕುಮಾರ್ ಅವಳನ್ನು ಬಾಲ್ಕನಿಯಿಂದ ತಳ್ಳಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಂತ್ರಸ್ತೆಯ ಸಹೋದರ ರಾಜಕಿರಣ್, ಕಳೆದ ಮೂರು ವರ್ಷಗಳಿಂದ ಸಂಜೀವ್ ಕುಮಾರ್ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ದೂರಿದ್ದಾರೆ. ಇವರಿಬ್ಬರ ಸಂಬಂಧಕ್ಕೆ ನೀತು ಆಕ್ಷೇಪ ವ್ಯಕ್ತಪಡಿಸುತ್ತಿದ್ದಳು.
ತಾನು ದೆಹಲಿಯಲ್ಲಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದ ಸಂಜೀವ್ ಕುಮಾರ್, ಮಹಿಳೆಯೊಂದಿಗೆ ಅವಳ ಮನೆಯಲ್ಲಿ ಎರಡು ತಿಂಗಳ ಕಾಲ ವಾಸಿಸುತ್ತಿದ್ದ. ನನ್ನ ಸಹೋದರಿಗೆ ಈ ವಿಷಯ ತಿಳಿದಿತ್ತು. ಜಗಳದ ವೇಳೆ ಅವರು ತಮ್ಮ ಇಬ್ಬರು ಮಕ್ಕಳ ಸಮ್ಮುಖದಲ್ಲಿ ಅವಳನ್ನು ಬಾಲ್ಕನಿಯಿಂದ ತಳ್ಳಿದ್ದಾರೆ ಎಂದು ರಾಜ್ ಕಿರಣ್ ಹೇಳಿದ್ದಾರೆ.
ರಾಜಕಿರಣ್ ಅವರ ದೂರನ್ನು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂಜೀವ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಗೋಸೈಗಂಜ್ ಎಸ್‌ಹೆಚ್‌ಒ ಶೈಲೇಂದ್ರ ಗಿರಿ ತಿಳಿಸಿದ್ದಾರೆ.