ಅನೇಕರಿಗೆ ಬೆಕ್ಕು ಅಂದ್ರೆ ಪಂಚಪ್ರಾಣ ಆಗಿರುತ್ತೆ. ಒಂದೆರಡು ಕ್ಷಣ ಅದು ಕಣ್ಮುಂದೆ ಓಡಾಡಿಲ್ಲ ಅಂದ್ರೆ ಅವರು ಮಾಡ್ಕೊಳ್ಳೊ ಟೆನ್ಷನ್ ಅಷ್ಟಿಷ್ಟಲ್ಲ. ಆದರೆ ಇಲ್ಲೊಬ್ಬ ಕ್ರೂರಿ ಇದ್ದಾನೆ ನೋಡಿ, ತನ್ನ ಮನೆ ಬೆಕ್ಕು ಕಾಣಿಸ್ಲಿಲ್ಲ, ಅದನ್ನ ಪಕ್ಕದ ಮನೆಯವನು ಕದ್ದಿರಬಹುದು ಅನ್ನೋ ಅನುಮಾನದಲ್ಲೇ ಪಕ್ಕದ ಮನೆಯಲ್ಲಿದ್ದ ಮೂವತ್ತಕ್ಕೂ ಹೆಚ್ಚು ಪಾರಿವಾಳಗಳಿಗೆ ವಿಷ ಹಾಕಿ ಕೊಂದಿದ್ದಾನೆ.
ಆರೋಪಿ ಅಬಿದ್ ಒಂದು ಮುದ್ದಾದ ಬೆಕ್ಕನ್ನ ಸಾಕಿದ್ದ. ಆ ಬೆಕ್ಕು ಸದಾ ಆತನ ಸುತ್ತ ಮುತ್ತ ಓಡಾಡಿಕೊಂಡು ಇರುತ್ತಿತ್ತು. ಆದರೆ ಅದೊಂದು ದಿನ ಆತ ಮನೆಗೆ ಬಂದರೂ ಆ ಬೆಕ್ಕು ಮಾತ್ರ ಆತನ ಬಳಿ ಬಂದಿರಲಿಲ್ಲ. ಆಗ ಅಬಿದ್‌ಗೆ ಪಕ್ಕದ ಮನೆಯ ವಾರಿಸ್ ಅಲಿ ಮೇಲೆ ಅನುಮಾನ ಬಂದಿದೆ.
ಎರಡು ಮನೆಗಳ ನಡುವೆ ಆಗಾಗ ಗಲಾಟೆಗಳು ನಡೆಯುತ್ತಲೇ ಇರುತ್ತಿತ್ತು. ಆದರೆ ಈಗ ನಾಪತ್ತೆಯಾಗಿರುವ ಒಂದೇ ಕಾರಣ ಇಟ್ಟುಕೊಂಡು ಆರೋಪಿ ಅಬಿದ್, ಪಕ್ಷಿ ಪ್ರೇಮಿ ವಾರಿಸ್ ಅಲಿ ಮನೆಯಲ್ಲಿದ್ದ30 ಕ್ಕೂ ಹೆಚ್ಚು ಪಾರಿವಾಳಗಳಿಗೆ ವಿಷ ಹಾಕಿ ಸಾಯಿಸಿದ್ದಾನೆ. ಆದರೆ ಈ ಘಟನೆ ನಂತರ ಆರೋಪಿ ಅಬಿದ್ ಬೆಕ್ಕು, ಈಗ ಮನೆಗೆ ಮರಳಿ ಬಂದಿದೆ.
ಅಬಿದ್ ಬೆಕ್ಕು ಕಣ್ಮರೆ ಆಗಿದ್ದಕ್ಕೆ ಸೇಡು ತೀರಿಸಿಕೊಳ್ಳಲು, ಆಹಾರಕ್ಕೆ ವಿಷ ಬೆರೆಸಿ ಅಲಿಯ ಪಾರಿವಾಳಗಳಿಗೆ ತಿನ್ನಲು ನೀಡಿದ್ದ ಎಂದು ಹೇಳಲಾಗಿದೆ. ಅದನ್ನು ಸೇವಿಸಿದ 78 ಪಾರಿವಾಳಗಳಲ್ಲಿ 30 ಪಾರಿವಾಳ ಮೃತಪಟ್ಟಿವೆ, ಇನ್ನು ಅನೇಕ ಪಕ್ಷಿಗಳು ಅಸ್ವಸ್ಥಗೊಂಡಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಥಾನಾ ಸದರ್ ಬಜಾರ್‌ನ ಮೊಹಲ್ಲಾ ಅಮಂಜಾಯ್‌ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಅಬಿದ್ ಸೇರಿದಂತೆ ಮೂವರು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 428ರ ಅಡಿ (ಪ್ರಾಣಿಗಳನ್ನು ಕೊಲ್ಲುವ ಕೇಡಿತನ ಎಸಗುವುದು) ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.