ಲಖ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ರಾಜ್ಯದಾದ್ಯಂತ ಒಟ್ಟು 9.74 ಲಕ್ಷ ಟ್ಯಾಬ್ಲೆಟ್ ಗಳು ಮತ್ತು ಸ್ಮಾರ್ಟ್ ಫೋನ್‌ಗಳನ್ನು ವಿತರಿಸುವುದಾಗಿ ಘೋಷಿಸಿದೆ.
ಇದನ್ನು 100 ದಿನಗಳ ಕ್ರಿಯಾ ಯೋಜನೆಯಲ್ಲಿ ಸೇರಿಸುವಂತೆ ಮಾಹಿತಿ ತಂತ್ರಜ್ಞಾನ ಇಲಾಖೆಗೆ ಈಗಾಗಲೇ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ಕಳೆದ ಎರಡು ವರ್ಷಗಳಿಂದ ಯುವಕರು ಶಾಲಾ-ಕಾಲೇಜುಗಳಿಗೆ ಹೋಗಲು ಸಾಧ್ಯವಾಗದೆ ಶಿಕ್ಷಣ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಯುವಕರ ಶಿಕ್ಷಣಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಸರ್ಕಾರ ಆನ್ ಲೈನ್ ಶಿಕ್ಷಣ ಪ್ರಾರಂಭಿಸಿತ್ತು. ಆದರೆ, ಹೆಚ್ಚಿನ ಯುವಕರಿಗೆ ಟ್ಯಾಬ್, ಸ್ಮಾರ್ಟ್ ಫೋನ್ ಇಲ್ಲದೇ ತೊಂದರೆಯಾಗಿತ್ತು. ಬಿಜೆಪಿ ತನ್ನ ಸಂಕಲ್ಪ ಪತ್ರದಲ್ಲಿ 2 ಕೋಟಿ ಯುವಕರನ್ನು ತಾಂತ್ರಿಕವಾಗಿ ಸಮರ್ಥರನ್ನಾಗಿಸಲು ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್‌ಗಳನ್ನು ನೀಡುವ ಗುರಿ ಹೊಂದಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು ತನ್ನ 100 ದಿನಗಳ ಕ್ರಿಯಾ ಯೋಜನೆಯಲ್ಲಿ 9.74 ಲಕ್ಷ ಟ್ಯಾಬ್ಲೆಟ್ ಗಳು ಮತ್ತು ಸ್ಮಾರ್ಟ್ ಫೋನ್ ಗಳನ್ನು ಯುವಕರಿಗೆ ನೀಡುವುದನ್ನು ಸೇರಿಸಿದೆ.
ಪ್ರತಿ ಜಿಲ್ಲೆಯಿಂದ ಟ್ಯಾಬ್ಲೆಟ್ ಗಳು ಮತ್ತು ಸ್ಮಾರ್ಟ್ ಫೋನ್ ಗಳಿಗೆ ಅರ್ಹ ಫಲಾನುಭವಿ ವಿದ್ಯಾರ್ಥಿಗಳನ್ನು ಗುರುತಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ.