ನವದೆಹಲಿ: ಉತ್ತರಪ್ರದೇಶದಲ್ಲಿ ಇಂದು 7 ನೇ ಹಾಗೂ ಕೊನೆಯ ಹಂತದ ಚುನಾವಣೆಗೆ ಮತದಾನ ಆರಂಭವಾಗಿದೆ.
9 ಜಿಲ್ಲೆಗಳ 54 ವಿಧಾನಸಭೆ ಕ್ಷೇತ್ರದ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದ್ದು, 613 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾರ್ಚ್ 10 ರಂದು ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ 5 ರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
7 ನೇ ಹಂತದ ಮತ ಚಲಾವಣೆ ಆರಂಭವಾಗುತ್ತಿದ್ದಂತೆ ಪ್ರಧಾನಿ ಮೋದಿ ಅವರು, ಹೊಸ ಮತದಾನ ದಾಖಲೆ ಸೃಷ್ಟಿಸಿ ಎಂದು ಮನವಿ ಮಾಡಿದ್ದಾರೆ.
ಇಂದು ನಡೆಯಲಿರುವ 7ನೇ ಮತ್ತು ಕೊನೆಯ ಹಂತದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಹೊಸ ದಾಖಲೆ ಸೃಷ್ಟಿಸುವಂತೆ ಉತ್ತರ ಪ್ರದೇಶದ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಸಂಸದೀಯ ಕ್ಷೇತ್ರ ವಾರಣಾಸಿ ಸೇರಿದಂತೆ 54 ಸ್ಥಾನಗಳನ್ನು ಒಳಗೊಂಡಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಅಂತಿಮ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ.
ರಾಜಕೀಯವಾಗಿ ನಿರ್ಣಾಯಕವಾಗಿರುವ ರಾಜ್ಯದಲ್ಲಿ ಸುಮಾರು ತಿಂಗಳ ಅವಧಿಯ ಮತದಾನ ಪ್ರಕ್ರಿಯೆಯ ಇಂದು ಕೊನೆಯಾಗಲಿದೆ. ಅಜಂಗಢ್, ಮೌ, ಜೌನ್ಪುರ್, ಗಾಜಿಪುರ, ಚಂದೌಲಿ, ವಾರಣಾಸಿ, ಮಿರ್ಜಾಪುರ, ಭದೋಹಿ ಮತ್ತು ಸೋನ್ಭದ್ರ ಜಿಲ್ಲೆಗಳಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ. ಇದು ಸಂಜೆ 6 ಗಂಟೆಯವರೆಗೆ ಮತದಾನ ಮುಂದುವರಿಯಲಿದ್ದು, 613 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.