ಅನಾರೋಗ್ಯದಿಂದ ಬಳಲುತ್ತಿದ್ದ ಸರ್ಕಾರಿ ವೈದ್ಯರೊಬ್ಬರು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ತಮ್ಮ ಕುಟುಂಬಸ್ಥರು ಇರುವ ಊರಿಗೆ ವರ್ಗಾವಣೆ ಬಯಸಿ ಕಳೆದ ಎರಡು ವರ್ಷಗಳಿಂದಲೂ ಪ್ರಯತ್ನ ನಡೆಸಿದ್ದು, ಅವರು ಮೃತಪಟ್ಟ ನಂತರ ತಿಥಿ ದಿನ ವರ್ಗಾವಣೆ ಆದೇಶ ಪತ್ರ ಬಂದ ಆಘಾತಕಾರಿ ಘಟನೆ ನಡೆದಿದೆ.
ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಚಿತ್ರಕೂಟದ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದೀಪೇಂದರ್ ಸಿಂಗ್ ಎಂಬ ವೈದ್ಯರು ಲಿವರ್ ತೊಂದರೆಯಿಂದ ಬಳಲುತ್ತಿದ್ದ ಕಾರಣ ಕುಟುಂಬಸ್ಥರ ನಿಗಾದಲ್ಲಿ ಆರೈಕೆ ಪಡೆದುಕೊಳ್ಳುವ ಸಲುವಾಗಿ ಪ್ರಯಾಗ್ ರಾಜ್ ಗೆ ವರ್ಗಾವಣೆ ಬಯಸಿದ್ದರು. ಇದಕ್ಕಾಗಿ ಅವರು ಕಳೆದ ಎರಡು ವರ್ಷಗಳಿಂದಲೂ ಪ್ರಯತ್ನ ನಡೆಸುತ್ತಿದ್ದು ಯಾವುದೇ ಪ್ರಯೋಜನವಾಗಿರಲಿಲ್ಲ.
ದೀಪೇಂದರ್ ಸಿಂಗ್ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ತೀವ್ರವಾಗಿ ಬಿಗಡಾಯಿಸಿದ್ದು ಜೂನ್ 17ರಂದು ಅವರು ಮೃತಪಟ್ಟಿದ್ದರು. ಕುಟುಂಬಸ್ಥರು ಜೂನ್ 30ರಂದು ಅವರ ತಿಥಿಯನ್ನು ಏರ್ಪಡಿಸಿದ್ದು, ಈ ಸಂದರ್ಭದಲ್ಲಿ ದೀಪೇಂದರ್ ಸಿಂಗ್ ಅವರ ಮೊಬೈಲ್ ಗೆ ವಾಟ್ಸಾಪ್ ಸಂದೇಶ ಬಂದಿದೆ.
ಅದರಲ್ಲಿ ಪ್ರಯಾಗ್ ರಾಜ್ ಗೆ ವರ್ಗಾವಣೆಯಾಗಿದ್ದರ ಮಾಹಿತಿ ನೋಡಿ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ವರ್ಗಾವಣೆಗೆ ಪ್ರಯತ್ನಿಸಿದಾಗ ಯಾವುದೇ ಸ್ಪಂದನೆ ನೀಡದೆ ಅವರು ಮೃತಪಟ್ಟ ಬಳಿಕ ವರ್ಗಾವಣೆಗೊಳಿಸಿರುವುದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.